
ಜಾಗತಿಕವಾಗಿ 100 ಕೋಟಿ ರೂ. ಗಡಿ ದಾಟಿ ಇತಿಹಾಸ ಬರೆದ ಸ್ಪೈ ಥ್ರಿಲ್ಲರ್ ಸಿನಿಮಾ ಧುರಂಧರ್
Dhurandhar 2| ಬಿಡುಗಡೆಗೂ ಮುನ್ನವೇ 120 ಕೋಟಿ ರೂ. ಬಾಚಿದ 'ಧುರಂಧರ್ 2' ಅಡ್ವಾನ್ಸ್ ಬುಕಿಂಗ್
ಈ ಸಿನಿಮಾ ಮಾರ್ಚ್ 19ರ ಗುರುವಾರದಂದು ಈದ್, ಯುಗಾದಿ ಮತ್ತು ಗುಡಿ ಪಡ್ವಾ ಹಬ್ಬಗಳ ವಿಶೇಷ ಸಂದರ್ಭದಲ್ಲಿ ತೆರೆಕಾಣಲಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಖ್ಯಾತ ನಿರ್ದೇಶಕ ಆದಿತ್ಯ ಧರ್ ನಿರ್ದೇಶನ ಹಾಗೂ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ 'ಧುರಂಧರ್ 2: ದಿ ರಿವೇಂಜ್' ಬಾಕ್ಸ್ ಆಫೀಸ್ನಲ್ಲಿ ಬಿಡುಗಡೆಗೂ ಅಡ್ವಾನ್ಸ್ ಬುಕಿಂಗ್ ಮೂಲಕ ಭಾರತದಲ್ಲಿ 60 ಕೋಟಿ ರೂಪಾಯಿ ಹಾಗೂ ಜಾಗತಿಕವಾಗಿ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ದಾಖಲೆ ನಿರ್ಮಿಸಿದೆ.
ಈ ಸಿನಿಮಾ ಮಾರ್ಚ್ 19ರ ಗುರುವಾರದಂದು ಈದ್, ಯುಗಾದಿ ಮತ್ತು ಗುಡಿ ಪಡ್ವಾ ಹಬ್ಬಗಳ ವಿಶೇಷ ಸಂದರ್ಭದಲ್ಲಿ ತೆರೆಕಾಣಲಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಭಾರತದಲ್ಲಿನ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ವಿವರಗಳನ್ನು ಗಮನಿಸಿದರೆ, ಭಾನುವಾರ ಒಂದೇ ದಿನ ಸುಮಾರು 1.5 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಹಿಂದಿ ಆವೃತ್ತಿಯು ಸಿಂಹಪಾಲು ಪಡೆದಿದ್ದು, 2.82 ಲಕ್ಷ ಟಿಕೆಟ್ಗಳ ಮಾರಾಟದೊಂದಿಗೆ 13.70 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಐಮ್ಯಾಕ್ಸ್ ಮತ್ತು ಡಾಲ್ಬಿ ಸಿನಿ ಫಾರ್ಮ್ಯಾಟ್ಗಳೂ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ತೆಲುಗು ಮಾರುಕಟ್ಟೆಯಲ್ಲಿ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪೈಪೋಟಿಯ ನಡುವೆಯೂ, ಧುರಂಧರ್ 2 ತೆಲುಗು ಆವೃತ್ತಿಯು 17.84 ಲಕ್ಷ ರೂಪಾಯಿಗಳನ್ನು ಬಾಚಿಕೊಂಡಿದೆ. ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಗಳೂ ಕೂಡ ತನ್ನದೇ ಆದ ಕೊಡುಗೆ ನೀಡುತ್ತಿವೆ. ಒಟ್ಟಾರೆಯಾಗಿ, ಪೇಯ್ಡ್ ಪ್ರಿವ್ಯೂ ಮತ್ತು ಮೊದಲ ದಿನದ ಬುಕಿಂಗ್ ಸೇರಿ ಭಾರತದಲ್ಲಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಿ ಮಾರುಕಟ್ಟೆಯಲ್ಲೂ ಧುರಂಧರ್ 2 ಅಬ್ಬರ ಜೋರಾಗಿದೆ. ಉತ್ತರ ಅಮೆರಿಕಾದಲ್ಲಿ ಆರಂಭಿಕ ವಾರಾಂತ್ಯಕ್ಕೆ 5 ಮಿಲಿಯನ್ ಡಾಲರ್ (ಅಂದಾಜು 46 ಕೋಟಿ ರೂಪಾಯಿ) ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ, ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳ ಒಟ್ಟು ಅಡ್ವಾನ್ಸ್ ಬುಕಿಂಗ್ ಮೊತ್ತ 120 ಕೋಟಿ ರೂಪಾಯಿಗಳನ್ನು ತಲುಪಿದೆ. ಈ ಸಿನಿಮಾಗೆ 'A' ಪ್ರಮಾಣಪತ್ರ ಸಿಕ್ಕಿದೆ.
ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಅವರ ಬಿ62 ಸ್ಟುಡಿಯೋಸ್ ಹಾಗೂ ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗವು ಭಾರತದಲ್ಲಿ 890 ಕೋಟಿ ಹಾಗೂ ವಿಶ್ವಾದ್ಯಂತ 1300 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು.

