Tamil Nadu politics: Vijay debunks NDA alliance rumours; Secular ideology is the ultimate!
x

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ವಿಜಯ್

TVK Vijay| ನಟ ವಿಜಯ್ ಘೋಷಿತ ಆಸ್ತಿ 404 ಕೋಟಿ ರೂಪಾಯಿ; ಪತ್ನಿ ಸಂಗೀತಾಗೆ 15 ಕೋಟಿ ಆಸ್ತಿ

ನಟ ವಿಜಯ್‌ 2026ರ ಚುನಾವಣೆಗೆ 404 ಕೋಟಿ ರೂ. ಚರಾಸ್ತಿ ಘೋಷಿಸಿದ್ದಾರೆ. 320 ಕೋಟಿ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳ ಜೊತೆ 67 ರೂ.ಸಾವಿರದ ಟಿವಿಎಸ್ ಎಕ್ಸ್‌ಎಲ್ ಕೂಡ ಇವರ ಬಳಿ ಇರುವುದು ವಿಶೇಷವಾಗಿದೆ.


Click the Play button to hear this message in audio format

ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯದತ್ತ ಮುಖ ಮಾಡಿರುವ ತಮಿಳು ಸೂಪರ್ ಸ್ಟಾರ್ ವಿಜಯ್ ದಳಪತಿ ಅವರ ಆಸ್ತಿ ವಿವರ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಕೊನೆಯ ಸಿನಿಮಾ 'ಜನನಾಯಕನ್' ಮುಗಿಸಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವ ವಿಜಯ್, ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಚುನಾವಣಾ ಕಣಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ.

ಅಫಿಡವಿಟ್‌ನಲ್ಲಿ ನೀಡಿರುವ ಮಾಹಿತಿಯಂತೆ ವಿಜಯ್ ಅವರ ಒಟ್ಟು ನಿವ್ವಳ ಆಸ್ತಿ ಸುಮಾರು 404.58 ಕೋಟಿ ರೂಪಾಯಿಗಳಾಗಿದೆ. 2024-25ರ ಸಾಲಿನಲ್ಲಿ ಅವರ ವಾರ್ಷಿಕ ಆದಾಯ 184 ಕೋಟಿ ರೂಪಾಯಿ ಎಂದು ವರದಿಯಾಗಿದೆ. ವಿಶೇಷವೆಂದರೆ ವಿಜಯ್ ಅವರ ಬ್ಯಾಂಕ್ ಬ್ಯಾಲೆನ್ಸ್ ಬರೋಬ್ಬರಿ 320 ಕೋಟಿ ರೂಪಾಯಿಗಳಷ್ಟಿದೆ. ಅವರ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಅವರ ಬ್ಯಾಂಕ್ ಖಾತೆಗಳಲ್ಲಿ ತಲಾ 4 ಲಕ್ಷ ರೂಪಾಯಿಗಳಿವೆ. ಇನ್ನು ಅವರ ಪತ್ನಿ ಸಂಗೀತಾ ಅವರ ಹೆಸರಿನಲ್ಲಿ 10.43 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ.

ತಮ್ಮ ಪತ್ನಿ ಸಂಗೀತಾ ಅವರಿಗೆ ವಿಜಯ್ ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದಾರೆ. ಇಂಡಿಯನ್ ಬ್ಯಾಂಕ್‌ನಲ್ಲಿ 25 ಕೋಟಿ, ಆಕ್ಸಿಸ್ ಬ್ಯಾಂಕ್‌ನಲ್ಲಿ 40 ಕೋಟಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 20 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ಇರಿಸಿದ್ದಾರೆ. ಇದರೊಂದಿಗೆ 391 ಸವರನ್ ಚಿನ್ನಾಭರಣಗಳನ್ನು ಅವರಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿಜಯ್ ಅವರು ತಮ್ಮ ತಂದೆಗೆ 3.02 ಕೋಟಿ, ತಾಯಿಗೆ 87 ಲಕ್ಷ ಹಾಗೂ ಪತ್ನಿ ಸಂಗೀತಾ ಅವರಿಗೆ 12.60 ಕೋಟಿ ರೂಪಾಯಿ ಸೇರಿದಂತೆ ಒಟ್ಟು 76 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಾಲವಾಗಿ ನೀಡಿದ್ದಾರೆ.

ಐಷಾರಾಮಿ ಕಾರುಗಳು ಮತ್ತು ಸ್ಥಿರಾಸ್ತಿಗಳು

ವಾಹನಗಳ ವಿಚಾರಕ್ಕೆ ಬಂದರೆ ವಿಜಯ್ ಬಳಿ 3 ಕೋಟಿ ರೂಪಾಯಿ ಮೌಲ್ಯದ ಟೊಯೋಟಾ ಲೆಕ್ಸಸ್ ಸೇರಿದಂತೆ ಎರಡು ಬಿಎಂಡಬ್ಲ್ಯು, ಟೊಯೋಟಾ ವೆಲ್‌ಫೈರ್ ಮತ್ತು ಮಾರುತಿ ಸ್ವಿಫ್ಟ್ ಕಾರುಗಳಿವೆ. ಇವುಗಳ ಒಟ್ಟು ಮೌಲ್ಯ 7.45 ಕೋಟಿ ರೂಪಾಯಿ. ಇನ್ನು ಕೇವಲ 67,000 ರೂಪಾಯಿ ಬೆಲೆಯ ಟಿವಿಎಸ್ ಎಕ್ಸ್‌ಎಲ್ ಸೂಪರ್ ಕೂಡ ಅವರ ಸಂಗ್ರಹದಲ್ಲಿದೆ. ಸ್ಥಿರಾಸ್ತಿಗಳ ವಿಷಯದಲ್ಲಿ ಅವರು ಒಟ್ಟು ಹತ್ತು ಪ್ರಾಪರ್ಟಿಗಳ ಒಡೆಯರಾಗಿದ್ದಾರೆ. ನೀಲಂಕರೆ, ಮೈಲಾಪುರ, ಸಾಲಿಗ್ರಾಮ ಹಾಗೂ ಶೋಲಿಂಗನಲ್ಲೂರು ಸೇರಿದಂತೆ ತಮಿಳುನಾಡಿನ ವಿವಿಧೆಡೆ ಅವರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆ ಹಾಗೂ ಭೂಮಿಯನ್ನು ಹೊಂದಿದ್ದಾರೆ.

ಒಂದೆಡೆ ರಾಜಕೀಯ ಜೀವನದ ಏಳಿಗೆಯಿದ್ದರೆ, ಮತ್ತೊಂದೆಡೆ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಕಳೆದ ಫೆಬ್ರವರಿಯಲ್ಲಿ ಅವರ ಪತ್ನಿ ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂಬ ಆರೋಪದ ಮೇಲೆ ಈ ಅರ್ಜಿ ಸಲ್ಲಿಕೆಯಾಗಿದ್ದು, ಇದು ಅವರ ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ರಾಜಕೀಯ ಪ್ರವೇಶದ ಹಂತದಲ್ಲೇ ಇಂತಹ ಕೌಟುಂಬಿಕ ಕಲಹ ವಿಜಯ್ ಅವರಿಗೆ ಸವಾಲಾಗಿ ಪರಿಣಮಿಸಿದೆ.

Read More
Next Story