Actor Madhubala| ಮಧುಬಾಲಾ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ?
x

Actor Madhubala| ಮಧುಬಾಲಾ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ?

ಮಧುಬಾಲಾ ಅವರ ಸೌಂದರ್ಯ, ಗಾಂಭೀರ್ಯ ಮತ್ತು ಭಾವಪೂರ್ಣ ಅಭಿನಯವನ್ನು ತೆರೆಯ ಮೇಲೆ ಮರುಸೃಷ್ಟಿಸಲು ಸಾಯಿ ಪಲ್ಲವಿಯವರೇ ಸರಿ ಎಂಬ ಮಾತುಗಳು ಬಿಟೌನ್‌ನಲ್ಲಿ ಜೋರಾಗಿ ಕೇಳಿಬರುತ್ತಿವೆ.


Click the Play button to hear this message in audio format

ತನ್ನ ನೈಜ ನಟನೆಯ ಮೂಲಕವೇ ಹೊಸ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ, ಈಗ ಭಾರತೀಯ ಚಿತ್ರರಂಗದ ಸರ್ವಕಾಲಿಕ ಸುಂದರಿ ಮಧುಬಾಲಾ ಅವರ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇಡೀ ಸಿನಿರಂಗದಲ್ಲಿ ಹರಿದಾಡುತ್ತಿದೆ.

ಗ್ಲಾಮರ್‌ಗಿಂತಲೂ ಪಾತ್ರದ ತೂಕಕ್ಕೆ ಹೆಚ್ಚಿನ ಒತ್ತು ನೀಡುವ ಈ ನಟಿ, ಹಿಂದಿ ಚಿತ್ರರಂಗದ 'ವೀನಸ್' ಎಂದೇ ಪ್ರಸಿದ್ಧರಾದ ಮಧುಬಾಲಾ ಅವರ ಐಕಾನಿಕ್ ಪಾತ್ರಕ್ಕೆ ಸೂಕ್ತ ಆಯ್ಕೆ ಎಂದು ಬಾಲಿವುಡ್‌ನ ದಿಗ್ಗಜ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಧುಬಾಲಾ ಅವರ ಸೌಂದರ್ಯ, ಗಾಂಭೀರ್ಯ ಮತ್ತು ಭಾವಪೂರ್ಣ ಅಭಿನಯವನ್ನು ತೆರೆಯ ಮೇಲೆ ಮರುಸೃಷ್ಟಿಸಲು ಸಾಯಿ ಪಲ್ಲವಿಯವರೇ ಸರಿ ಎಂಬ ಮಾತುಗಳು ಬಿಟೌನ್‌ನಲ್ಲಿ ಜೋರಾಗಿ ಕೇಳಿಬರುತ್ತಿವೆ.

ಸದ್ಯ ಸಾಯಿ ಪಲ್ಲವಿ ಬಾಲಿವುಡ್‌ನಲ್ಲಿ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ 'ಏಕ್ ದಿನ್' ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಈ ಚಿತ್ರವು ಮೇ 1ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ರಣಬೀರ್ ಕಪೂರ್ ನಟನೆಯ ಬಹುಕೋಟಿ ವೆಚ್ಚದ 'ರಾಮಾಯಣ' ಚಿತ್ರದಲ್ಲಿ ಅವರು ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳಿನಲ್ಲಿ ಧನುಷ್ ಅವರೊಂದಿಗೂ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವ ಅವರು, ಬನ್ಸಾಲಿ ಅವರ ಚಿತ್ರಕ್ಕೆ ಸಮಯ ಹೊಂದಿಸುವುದು ದೊಡ್ಡ ಸವಾಲಾಗಿದೆ. ಈ ಪ್ರಾಜೆಕ್ಟ್ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದರೆ, ಸಾಯಿ ಪಲ್ಲವಿ ಅವರ ಕೆರಿಯರ್‌ನಲ್ಲಿ ಇದು ಅತಿದೊಡ್ಡ ಮೈಲಿಗಲ್ಲಾಗಲಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಧುಬಾಲಾ ಎನ್ನುವ ಹೆಸರು ಒಂದು ಮಾಂತ್ರಿಕ ಶಕ್ತಿ. ಕೇವಲ ಸೌಂದರ್ಯದಿಂದಷ್ಟೇ ಅಲ್ಲದೆ, ತನ್ನ ಅದ್ಭುತ ನಟನೆಯ ಮೂಲಕ 1950 ಮತ್ತು 60ರ ದಶಕದಲ್ಲಿ ಬಾಲಿವುಡ್ ಆಳಿದ ಈ ನಟಿಯ ಜೀವನವು ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇರಲಿಲ್ಲ.ಕೇವಲ 9ನೇ ವಯಸ್ಸಿನಲ್ಲಿ 'ಬಸಂತ್' (1942) ಚಿತ್ರದ ಮೂಲಕ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಇವರು, ನಂತರ ದೇವಿಕಾ ರಾಣಿ ಅವರ ಸಲಹೆಯಂತೆ ತಮ್ಮ ಹೆಸರನ್ನು 'ಮಧುಬಾಲಾ' ಎಂದು ಬದಲಾಯಿಸಿಕೊಂಡರು. 14ನೇ ವಯಸ್ಸಿನಲ್ಲಿ 'ನೀಲ್ ಕಮಲ್' ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು. 1949ರಲ್ಲಿ ತೆರೆಕಂಡ 'ಮಹಲ್' ಸಿನಿಮಾ ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು.

ಬಳಿಕ ಮುಘಲ್-ಎ-ಅಜಮ್ ಸಿನಿಮಾದ ಅನಾರ್ಕಲಿ ಪಾತ್ರದ ಮೂಲಕ ಇಂದಿಗೂ ಇವರು ಮನೆಮಾತಾಗಿದ್ದಾರೆ. ಚಲ್ತಿ ಕಾ ನಾಮ್ ಗಾಡಿ, ಹೌರಾ ಬ್ರಿಡ್ಜ್, ಕಾಳಾ ಪಾನಿ, ಮತ್ತು ಮಿಸ್ಟರ್ ಆಂಡ್ ಮಿಸಸ್ 55 ಇವು ಇವರು ನಟಿಸಿರುವ ಅದ್ಭುತ ಸಿನಿಮಾಗಳು.

ಮಧುಬಾಲಾ ಅವರ ಜೀವನವು ಹೊರಗಿನಿಂದ ಎಷ್ಟು ಸುಂದರವಾಗಿ ಕಾಣುತ್ತಿತ್ತೋ, ಒಳಗಿನಿಂದ ಅಷ್ಟೇ ನೋವಿನಿಂದ ಕೂಡಿತ್ತು. ನಟ ದಿಲೀಪ್ ಕುಮಾರ್ ಅವರೊಂದಿಗೆ ಸುದೀರ್ಘವಾದ ಮತ್ತು ಚರ್ಚಿತವಾದ ಪ್ರೇಮ ಸಂಬಂಧ ಹೊಂದಿದ್ದ ಇವರು, ಕಾರಣಾಂತರಗಳಿಂದ ಅವರಿಂದ ದೂರಾದರು. ನಂತರ 1960 ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು.

ಮಧುಬಾಲಾ ಅವರಿಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿತ್ತು.ಆ ಕಾಲದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿರಲಿಲ್ಲ. ಶೂಟಿಂಗ್ ಸೆಟ್‌ಗಳಲ್ಲಿ ರಕ್ತವಾಂತಿ ಮಾಡಿಕೊಂಡಿದ್ದರೂ, ತನ್ನ ಕುಟುಂಬವನ್ನು ಸಲಹುವ ಜವಾಬ್ದಾರಿಯಿಂದ ನಟನೆಯನ್ನು ಮುಂದುವರಿಸಿದ್ದರು. ಕೊನೆಗೆ ಕೇವಲ 36ನೇ ವಯಸ್ಸಿನಲ್ಲಿ ಮಧುಬಾಲಾ ಇಹಲೋಕ ತ್ಯಜಿಸಿದ್ದರು.

Read More
Next Story