
ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವಬೆದರಿಕೆ ಬಂದಿದೆ.
ರಣವೀರ್ ಸಿಂಗ್‌ಗೆ ಮತ್ತೊಮ್ಮೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ; 10 ಕೋಟಿ ರೂ.ಗೆ ಬೇಡಿಕೆ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬಾಲಿವುಡ್ ನಟ ರಣವೀರ್ ಸಿಂಗ್‌ಗೆ 10 ಕೋಟಿ ರೂಪಾಯಿ ಬೇಡಿಕೆಯ ಬೆದರಿಕೆ ಸಂದೇಶ ಬಂದಿದೆ. ಅಮೆರಿಕದ ಸಂಖ್ಯೆಯಿಂದ ವಾಟ್ಸಾಪ್ ವಾಯ್ಸ್ ನೋಟ್ ಬಂದಿದೆ.
ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೊಮ್ಮೆ ಜೀವ ಬೆದರಿಕೆ ಹಾಗೂ 10 ಕೋಟಿ ರೂಪಾಯಿ ಬೇಡಿಕೆಯ ವಾಟ್ಸ್ಆ್ಯಪ್ ಕರೆ ಬಂದಿದ್ದು ಸದ್ಯ ಮುಂಬೈನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ರಣವೀರ್ ಸಿಂಗ್ ಅವರ ಮ್ಯಾನೇಜರ್‌ಗೆ ಅಮೆರಿಕದ ಫೋನ್ ಸಂಖ್ಯೆಯಿಂದ ವಾಟ್ಸ್ಆ್ಯಪ್ ವಾಯ್ಸ್ ನೋಟ್ ಬಂದಿದ್ದು, ಅದರಲ್ಲಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಬೆದರಿಕೆ ಸಂದೇಶವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಹರಿ ಬಾಕ್ಸರ್ ಎಂಬಾತನಿಂದ ಬಂದಿದೆ ಎಂದು ಶಂಕಿಸಲಾಗಿದೆ. ಹರಿ ಬಾಕ್ಸರ್ ಈ ಹಿಂದೆ ಕೆನಡಾದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಬೆದರಿಕೆ ಸಂದೇಶದಲ್ಲಿ ಏನಿತ್ತು?
"ರಣವೀರ್ ಸಿಂಗ್, ನಿನ್ನ ಮುಂದಿನ ಏಳು ತಲೆಮಾರುಗಳು ನೆನಪಿಟ್ಟುಕೊಳ್ಳುವಂತೆ ನಾವು ನಿನ್ನನ್ನು ಸರಿಪಡಿಸುತ್ತೇವೆ. ನೀನು ಜನರಿಗೆ ಪೊಲೀಸ್ ದೂರು ನೀಡುವಂತೆ ಸಲಹೆ ನೀಡುತ್ತಿದ್ದೀಯಲ್ಲವೇ? ಈಗ ನೀನೇ ದೂರು ನೀಡಿದ್ದೀಯಾ, ಪರವಾಗಿಲ್ಲ. ನಿನ್ನ ಕೆಳಗೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯ ವಿವರ, ಅವರ ಮನೆ, ಅವರು ಕಚೇರಿಗೆ ಹೋಗುವ ಸಮಯ ಎಲ್ಲವೂ ನಮ್ಮ ಬಳಿ ಇದೆ. ನಾವು ನಿನಗೆ ನೇರವಾಗಿ ಏನೂ ಮಾಡುವುದಿಲ್ಲ, ಆದರೆ ನಿನ್ನ ಸಿಬ್ಬಂದಿಯನ್ನು ಗುರಿಯಾಗಿಸುತ್ತೇವೆ. ಆಗ ನಿನಗೆ ಬುದ್ಧಿ ಬರುತ್ತದೆ" ಎಂದು ಆ ವಾಯ್ಸ್ ನೋಟ್‌ನಲ್ಲಿ ಬೆದರಿಸಲಾಗಿದೆ.
ಯಾರು ಈ ಹ್ಯಾರಿ ಬಾಕ್ಸರ್?
ಪೊಲೀಸರ ಮೂಲಗಳ ಪ್ರಕಾರ, ಈ ಬೆದರಿಕೆ ಕರೆಗಳ ಹಿಂದೆ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಶೂಟರ್ ಹ್ಯಾರಿ ಬಾಕ್ಸರ್ ಎಂಬಾತನ ಕೈವಾಡವಿದೆ. ಈತ ಕೆನಡಾ ಅಥವಾ ಯುರೋಪ್‌ನಲ್ಲಿ ಕುಳಿತು ಭಾರತದ ಸೆಲೆಬ್ರಿಟಿಗಳಿಗೆ ಇಂಟರ್ನೆಟ್ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಈ ಹಿಂದೆ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲೂ ಈತನ ಹೆಸರು ಕೇಳಿಬಂದಿತ್ತು.
ರೋಹಿತ್ ಶೆಟ್ಟಿ ಮನೆ ಮುಂದೆ ಗುಂಡಿನ ದಾಳಿ ಲಿಂಕ್
ಈ ಬೆದರಿಕೆಗೂ ಮುನ್ನ ಜನವರಿ 31ರಂದು ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಮುಂದೆ ಅಪರಿಚಿತರು ಐದು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಇದರ ಜವಾಬ್ದಾರಿಯನ್ನು ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿತ್ತು. "ಇದು ಕೇವಲ ಟ್ರೈಲರ್ ಮಾತ್ರ, ಮುಂದಿನ ಬಾರಿ ಗುಂಡು ನಿಮ್ಮ ಮನೆಯ ಹೊರಗಲ್ಲ, ಬೆಡ್ರೂಮ್ ಒಳಗೆ ಹಾರಲಿದೆ," ಎಂದು ಎಚ್ಚರಿಸಲಾಗಿತ್ತು. ರಣವೀರ್ ಮತ್ತು ರೋಹಿತ್ ಶೆಟ್ಟಿ ಪರಸ್ಪರ ಆಪ್ತರಾಗಿರುವುದರಿಂದ ಇಬ್ಬರಿಗೂ ಏಕಕಾಲಕ್ಕೆ ಬೆದರಿಕೆಗಳು ಬರುತ್ತಿವೆ.
ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯು ತನ್ನ ಐಪಿ ವಿಳಾಸ ಮತ್ತು ಸ್ಥಳವನ್ನು ಮರೆಮಾಚಲು ವಿಪಿಎನ್ ಬಳಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆ ಧ್ವನಿ ಸಂದೇಶವು ಅಸಲಿಯೇ ಅಥವಾ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿದ್ದೇ ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪೊಲೀಸರು ಅಮೆರಿಕದ ಅಧಿಕಾರಿಗಳ ನೆರವನ್ನು ಸಹ ಕೋರಿದ್ದಾರೆ.
ಬಿಗಿ ಭದ್ರತೆಯಲ್ಲಿ ರಣವೀರ್-ದೀಪಿಕಾ ದಂಪತಿ
ಸತತ ಬೆದರಿಕೆಗಳ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬೈ ನಿವಾಸಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಆರು ಸಶಸ್ತ್ರ ಭದ್ರತಾ ಸಿಬ್ಬಂದಿಗಳನ್ನು ಅವರ ನಿವಾಸದ ಬಳಿ ನಿಯೋಜಿಸಲಾಗಿದ್ದು, ಖಾಸಗಿ ಬಾಡಿಗಾರ್ಡ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.

