Ramayana|ಸುಂದರಿ ರಕುಲ್ ಪ್ರೀತ್ ಸಿಂಗ್ ರಾಮಾಯಣದ ಶೂರ್ಪಣಖಿ!
x

ರಾಮಾಯಣ ಸಿನಿಮಾದಲ್ಲಿ ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್ ಮಿಂಚಲಿದ್ದಾರೆ.

Ramayana|ಸುಂದರಿ ರಕುಲ್ ಪ್ರೀತ್ ಸಿಂಗ್ ರಾಮಾಯಣದ ಶೂರ್ಪಣಖಿ!

ರಾಮಾಯಣ ಸಿನಿಮಾದಲ್ಲಿ ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್ ಮಿಂಚಲಿದ್ದಾರೆ. ಕಾಜಲ್ ಅಗರ್ವಾಲ್ ಬದಲಿಗೆ ರಕುಲ್ ಆಯ್ಕೆಯಾಗಿದ್ದು, ಸೀತೆಗಿಂತಲೂ ಸುಂದರವಾಗಿ ಕಾಣಲಿರುವ ಶೂರ್ಪಣಖಿ ಪಾತ್ರದ ಅಪ್‌ಡೇಟ್ ಇಲ್ಲಿದೆ.


Click the Play button to hear this message in audio format

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದಿಂದ ದಿನಕ್ಕೊಂದು ಕುತೂಹಲಕಾರಿ ಸುದ್ದಿಗಳು ಹೊರಬರುತ್ತಿವೆ. ಹನುಮ ಜಯಂತಿಯಂದು ಬಿಡುಗಡೆಯಾದ ಟೀಸರ್ ಸಿನಿಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಈಗ ಚಿತ್ರದ ಪ್ರಮುಖ ಪಾತ್ರವೊಂದರ ಆಯ್ಕೆಯ ಕುರಿತು ಭಾರಿ ಚರ್ಚೆ ಶುರುವಾಗಿದೆ. ಚಿತ್ರದ ಅತ್ಯಂತ ಪ್ರಮುಖ ಹಾಗೂ ವಿವಾದಾತ್ಮಕ ಪಾತ್ರವಾದ ‘ಶೂರ್ಪಣಖಿ’ಯಾಗಿ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಬಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಆರಂಭದಲ್ಲಿ ಈ ಪಾತ್ರಕ್ಕಾಗಿ ಸೌತ್ ಸುಂದರಿ ಕಾಜಲ್ ಅಗರ್ವಾಲ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು ಎಂದು ಹೇಳಲಾಗಿತ್ತು. ಆದರೆ, ಈಗ ಕಾಜಲ್ ಬದಲಿಗೆ ರಕುಲ್ ಪ್ರೀತ್ ಸಿಂಗ್ ಅವರನ್ನೇ ಈ ಪಾತ್ರಕ್ಕೆ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಸೀತೆಗಿಂತಲೂ ಶೂರ್ಪಣಖಿ ಪಾತ್ರ ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬುದು ನಿರ್ದೇಶಕರ ಆಶಯವಾಗಿತ್ತು. ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವುದರಿಂದ, ಅವರ ಎದುರು ಶೂರ್ಪಣಖಿ ಪಾತ್ರಕ್ಕೆ ರಕುಲ್ ಅವರ ಲುಕ್ ಮತ್ತು ಎನರ್ಜಿ ಹೆಚ್ಚು ಸೂಕ್ತವಾಗಲಿದೆ ಎಂದು ಭಾವಿಸಿ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇನ್ನುಳಿದಂತೆ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವುದು ವಿಶೇಷ.

'ರಾಮಾಯಣ' ಚಿತ್ರದ ಮೊದಲ ತುಣುಕು ಗುರುವಾರ ಹನುಮ ಜಯಂತಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಈ ಐತಿಹಾಸಿಕ ಮಹಾಕಾವ್ಯದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಅತ್ಯಾಧುನಿಕ ಐಮ್ಯಾಕ್ಸ್ ಪರದೆಗಳಿಗಾಗಿಯೇ ಸಿದ್ಧವಾಗುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗವು 2026ರ ದೀಪಾವಳಿ ಹಬ್ಬದಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ರಣಬೀರ್ ನಟನೆಗೆ ಆಲಿಯಾ ಭಟ್ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಆಲಿಯಾ ಭಟ್, ಚಿತ್ರದ ಟೀಸರ್ ವೀಕ್ಷಿಸಿ ಪತಿ ರಣಬೀರ್ ಕಪೂರ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ರಣಬೀರ್ ಅವರ 'ಶ್ರೀರಾಮ'ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಅವರ ನಟನೆ ಅದ್ಭುತ ಮತ್ತು ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ ಎಂದು ಹೊಗಳಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶ್ರೀರಾಮನ ಪಾತ್ರದ ಬಗ್ಗೆ ರಣಬೀರ್ ಮಾತು

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿರುವ ರಣಬೀರ್ ಕಪೂರ್, ಈ ಪಾತ್ರವು ತಮಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗಿದೆ ಎಂದು ಹಂಚಿಕೊಂಡಿದ್ದಾರೆ. ರಾಮ ಎಂಬ ಹೆಸರು ಕೇವಲ ಹೆಸರಲ್ಲ, ಅದು ಕರುಣೆ, ಧೈರ್ಯ ಮತ್ತು ನೀತಿಯ ಸಂಕೇತ. ಆದರ್ಶ ಮಾನವನ ಗುಣಗಳನ್ನು ಮೈಗೂಡಿಸಿಕೊಂಡಿರುವ ಈ ಪಾತ್ರವು ತಲೆಮಾರುಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Read More
Next Story