ಧುರಂಧರ್ 2: ದ ರಿವೇಂಜ್ ಟೀಸರ್ ಔಟ್: ಲಯಾರಿ ಪಟ್ಟಣದಲ್ಲಿ ರಣವೀರ್ ಖಡಕ್ ಡೈಲಾಗ್
x

'ಧುರಂಧರ್' ಸಿನಿಮಾ 

'ಧುರಂಧರ್ 2: ದ ರಿವೇಂಜ್' ಟೀಸರ್ ಔಟ್: ಲಯಾರಿ ಪಟ್ಟಣದಲ್ಲಿ ರಣವೀರ್ ಖಡಕ್ ಡೈಲಾಗ್

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2: ದ ರಿವೇಂಜ್' ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ! ಲಯಾರಿ ಪಟ್ಟಣದಲ್ಲಿ ಹಮ್ಜಾ ಅಬ್ಬರ ಹಾಗೂ ಸೇಡಿನ ಕಥೆಯನ್ನು ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ನೋಡಬಹುದು.


Click the Play button to hear this message in audio format

ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ 'ಧುರಂಧರ್' ಭರ್ಜರಿ ಯಶಸ್ಸಿನ ನಂತರ, ಪ್ರೇಕ್ಷಕರು ಅದರ ಎರಡನೇ ಭಾಗಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಈಗ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್‌ನ್ಯೂಸ್‌ ದೊರಕಿದ್ದು, ಚಿತ್ರತಂಡ ಬಹುನಿರೀಕ್ಷಿತ 'ಧುರಂಧರ್ 2: ದ ರಿವೇಂಜ್' ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿ ರಣವೀರ್ ಸಿಂಗ್ ಲಯಾರಿ ಪಟ್ಟಣವನ್ನು ಹೇಗೆ ತನ್ನ ವಶಕ್ಕೆ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ಟೀಸರ್ ಸಾಕ್ಷಿಯಾಗಿದೆ.

ಸುಮಾರು 1.12 ನಿಮಿಷಗಳ ಈ ಟೀಸರ್ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದೆ. ಟೀಸರ್‌ನ ಆರಂಭದಲ್ಲಿ ರಣವೀರ್ ಸಿಂಗ್ ಅವರ ಪಾತ್ರದ ಬಾಲ್ಯದ ದಿನಗಳನ್ನು ತೋರಿಸಲಾಗಿದ್ದು, ಹಮ್ಜಾ ಮಜಾರಿ ಎಂಬ ವ್ಯಕ್ತಿ ಲಯಾರಿ ಪಟ್ಟಣದ ಮೇಲೆ ಹೇಗೆ ತನ್ನ ಆಧಿಪತ್ಯ ಸ್ಥಾಪಿಸುತ್ತಾನೆ ಎಂಬ ತುಣುಕುಗಳನ್ನು ಒಳಗೊಂಡಿದೆ. ಈ ಚಿತ್ರವು ರಣವೀರ್ ಸಿಂಗ್ ಸ್ಪೈ ಆಗುವ ಮೊದಲಿನ ಜೀವನದ ಕಥೆಯನ್ನು ಬಿಚ್ಚಿಡಲಿದೆ ಎಂಬುದು ಟೀಸರ್‌ನಿಂದ ಸ್ಪಷ್ಟವಾಗುತ್ತದೆ.

ಟೀಸರ್‌ನ ಅಂತ್ಯದಲ್ಲಿ ರಣವೀರ್ ಸಿಂಗ್ ಅವರು 'ಉರಿ: ದ ಸರ್ಜಿಕಲ್ ಸ್ಟ್ರೈಕ್' ಚಿತ್ರದ ಅತ್ಯಂತ ಜನಪ್ರಿಯ ಸಂಭಾಷಣೆಯಾದ ಇದು ಹೊಸ ಭಾರತ, ಇದು ಶತ್ರುಗಳ ಮನೆಗೆ ನುಗ್ಗಿ ಹೊಡೆಯುತ್ತದೆ ಎಂದು ಹೇಳುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.

'ಧುರಂಧರ್ 2: ದ ರಿವೇಂಜ್' ಟೀಸರ್

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ರಣವೀರ್ ಸಿಂಗ್ ಅವರ ರಗಡ್ ಲುಕ್ ಅಭಿಮಾನಿಗಳಲ್ಲಿ ನಡುಕ ಹುಟ್ಟಿಸುವಂತಿದೆ. ಪೋಸ್ಟರ್ ಜೊತೆಗೆ ಹಂಚಿಕೊಂಡಿರುವ "ಈಗ ಹಾಳಾಗುವ ಸಮಯ ಬಂದಿದೆ"ಎಂಬ ಟ್ಯಾಂಗ್‌ಲೈನ್‌ ಈ ಬಾರಿ ಕಥೆ ಮತ್ತಷ್ಟು ಕ್ರೂರವಾಗಿ ಮತ್ತು ಸೇಡಿನಿಂದ ಕೂಡಿರಲಿದೆ ಎಂಬ ಮುನ್ಸೂಚನೆ ನೀಡಿದೆ. ಮೊದಲ ಭಾಗದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ್ದ ನಾಯಕ, ಈ ಬಾರಿ ಶತ್ರುಗಳ ಸಂಹಾರಕ್ಕೆ ಯಾವ ಹಂತಕ್ಕೂ ಹೋಗಬಲ್ಲ ಎಂಬ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎನ್ನಲಾಗಿದೆ.

ಜಿಯೋ ಹಾಟ್‌ಸ್ಟಾರ್‌ಗೆ ಜಿಗಿದ ಧುರಂಧರ್

ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕುಗಳನ್ನು ಜಿಯೋ ಹಾಟ್‌ಸ್ಟಾರ್ ಭಾರಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಮೂಲಗಳ ಪ್ರಕಾರ, ನೆಟ್‌ಫ್ಲಿಕ್ಸ್ ಮತ್ತು ಜಿಯೋ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಜಿಯೋ ಸಂಸ್ಥೆಯು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಈ ಸಿನಿಮಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಎನ್ನಲಾಗಿದೆ. ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಮತ್ತು ಆರ್. ಮಾಧವನ್ ಅವರಂತಹ ದಿಗ್ಗಜ ತಾರಾಗಣ ಹೊಂದಿರುವ ಈ ಚಿತ್ರವು ಈ ವರ್ಷದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳ ಪಟ್ಟಿಯಲ್ಲಿದೆ. ರಣವೀರ್ ಸಿಂಗ್ ಅಭಿನಯದ ಆದಿತ್ಯ ದರ್ ನಿರ್ದೇಶನ 'ಧುರಂಧರ್' ಸಿನಿಮಾ ಜನವರಿ 30ರಂದು ಬಿಡುಗಡೆ ಆಗಿದೆ.

'ಧುರಂಧರ್' ಗಳಿಕೆಯಲ್ಲಿ 1000 ಕೋಟಿ ರೂಪಾಯಿಗಳ ಗಡಿ ದಾಟಿದೆ. ಈ ಸಾಧನೆಯ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಿನಿಮಾಗಳ ಸಾಲಿಗೆ ಈ ಚಿತ್ರ ಸೇರ್ಪಡೆಯಾಗಿದೆ. ವಿಶೇಷವೆಂದರೆ, ಭಾರತದಲ್ಲಿ ಇದುವರೆಗೆ ಕೇವಲ ಬೆರಳೆಣಿಕೆಯ ಸಿನಿಮಾಗಳು ಮಾತ್ರ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿವೆ. ಈ ಪಟ್ಟಿಗೆ ಸೇರಿದ ಮೊಟ್ಟಮೊದಲ ಏಕ-ಭಾಷೆಯ ಚಿತ್ರ ಎಂಬ ಹೆಗ್ಗಳಿಕೆಗೆ 'ಧುರಂಧರ್' ಪಾತ್ರವಾಗಿದೆ. ಈ ಹಿಂದೆ ಸಾವಿರ ಕೋಟಿ ಗಳಿಸಿದ ಇತರ ಚಿತ್ರಗಳು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದವು. ಈಗ ಬಾಲಿವುಡ್‌ನ ಈ ಚಿತ್ರವು ಆ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿ ತನ್ನದೇ ಆದ ಸ್ಥಾನ ಭದ್ರಪಡಿಸಿಕೊಂಡಿದೆ.

Read More
Next Story