
2012ರ ಸೂಪರ್ ಹಿಟ್ 'ಕಾಕ್ಟೇಲ್' ಸೀಕ್ವೆಲ್ನಲ್ಲಿ ರಶ್ಮಿಕಾ ಹವಾ
ಹಸೆಮಣೆ ಏರಿದ ಬೆನ್ನಲ್ಲೇ ಸಿನಿ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ 'ನ್ಯಾಷನಲ್ ಕ್ರಶ್' ರಶ್ಮಿಕಾ!
ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸಿನಿಮಾದ ಆಕರ್ಷಕ ಪೋಸ್ಟರ್ಗಳನ್ನು ಹಂಚಿಕೊಂಡಿದ್ದು, ಚಿತ್ರದ ಟೀಸರ್ ಮಾರ್ಚ್ 18 ರಂದು ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ 'ಕಾಕ್ಟೇಲ್ 2' ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡವು ಇದೀಗ ಅಧಿಕೃತ ದಿನಾಂಕವನ್ನು ಘೋಷಿಸಿದೆ. ಶಾಹಿದ್ ಕಪೂರ್, ಕೃತಿ ಸನೊನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಇದೇ ಜೂನ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹೋಮಿ ಅದಜಾನಿಯಾ ಆಕ್ಷನ್ ಕಟ್ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸಿನಿಮಾದ ಆಕರ್ಷಕ ಪೋಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರದ ಟೀಸರ್ ಮಾರ್ಚ್ 18 ರಂದು ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹ ಇತ್ತೀಚೆಗಷ್ಟೇ ಉದಯಪುರದಲ್ಲಿ ನೆರವೇರಿತ್ತು. ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ನಡೆದ ಇವರ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ 'ಕಾಕ್ಟೇಲ್ 2' ಚಿತ್ರತಂಡಕ್ಕೆ ರಶ್ಮಿಕಾ ಆಹ್ವಾನ ನೀಡಿದ್ದರು. ಈ ಸಂಭ್ರಮದಲ್ಲಿ ಕೃತಿ ಸನೂನ್, ನಿರ್ದೇಶಕ ಹೋಮಿ ಅದಜಾನಿಯಾ, ನಿರ್ಮಾಪಕ ದಿನೇಶ್ ವಿಜನ್ ಮತ್ತು ಅವರ ಪತ್ನಿ ಪ್ರಮಿತಾ ತನ್ವರ್ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು.
ಕಳೆದ ಜನವರಿ ತಿಂಗಳಲ್ಲೇ ಚಿತ್ರದ ಸಂಪೂರ್ಣ ಶೂಟಿಂಗ್ ಮುಕ್ತಾಯಗೊಂಡಿದ್ದು, ಚಿತ್ರತಂಡವು ಭರ್ಜರಿ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿತ್ತು. ಅಂದಹಾಗೆ, 2024ರಲ್ಲಿ ತೆರೆಕಂಡ 'ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರದ ಯಶಸ್ಸಿನ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೂನ್ ಮತ್ತೊಮ್ಮೆ ಈ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.
2012ರಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ 'ಕಾಕ್ಟೇಲ್' ಚಿತ್ರವನ್ನು ಕೂಡ ಹೋಮಿ ಅದಜಾನಿಯಾ ಅವರೇ ನಿರ್ದೇಶಿಸಿದ್ದರು.
ರಶ್ಮಿಕಾ ಮತ್ತು ಕೃತಿ ಲೆಸ್ಬಿಯನ್ ಜೋಡಿ?
ಹೌದು, ಕೇಳಲು ಅಚ್ಚರಿ ಎನಿಸಿದರೂ ವರದಿಗಳ ಪ್ರಕಾರ ಈ ಬಾರಿ 'ಕಾಕ್ಟೇಲ್ 2' ನಲ್ಲಿ ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಟಿ ಕೃತಿ ಸನೊನ್ ಮತ್ತು ಸೌತ್ ಸುಂದರಿ ರಶ್ಮಿಕಾ ಮಂದಣ್ಣ ಲೆಸ್ಬಿಯನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಭಾಗದಲ್ಲಿ ಒಂದು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳ ನಡುವಿನ ತ್ರಿಕೋನ ಪ್ರೇಮಕಥೆ ಇತ್ತು. ಆದರೆ ಈ ಬಾರಿ ಇಬ್ಬರು ನಾಯಕಿಯರ ನಡುವೆ ಪ್ರೀತಿ ಇರಲಿದ್ದು, ಶಾಹಿದ್ ಕಪೂರ್ ಪಾತ್ರವು ಇವರ ನಡುವಿನ ಮೂರನೇ ಕೊಂಡಿಯಾಗಿರಲಿದೆ ಎಂದು ಹೇಳಲಾಗುತ್ತಿದೆ. ಆಧುನಿಕ ಸಂಬಂಧಗಳ ಸಂಕೀರ್ಣತೆಯನ್ನು ಈ ಸಿನಿಮಾ ಅನಾವರಣಗೊಳಿಸಲಿದೆ ಎಂದು ಹೇಳಲಾಗಿದ್ದರೂ, ಚಿತ್ರತಂಡದ ಕಡೆಯಿಂದ ಈ ಬಗ್ಗೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ.

