
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರ್ಬಿ (ಅಸ್ಸಾಂ) ಭಾಷೆಯ ಚಿತ್ರ ‘ಕಾಂಗ್ಬೋ ಅಲೋಟಿʼ
ಸಿನಿಮಾ ಮೂಲಕ ಸಾಮಾಜಿಕ ಸ್ಮೃತಿಗಳನ್ನು ಮೆಲುಕು ಹಾಕಿದ ನಿರ್ದೇಶಕ ಖಂಜನ್ ಕಿಶೋರ್ ನಾಥ್
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಖಂಜನ್ ಕಿಶೋರ್ ನಾಥ್ ನಿರ್ದೇಶನದ ಕರ್ಬಿ ಭಾಷೆಯ ‘ಕಾಂಗ್ಬೋ ಅಲೋಟಿʼ ಚಿತ್ರವು ಈಶಾನ್ಯ ಭಾರತದ ಸಾಮಾಜಿಕ ಅಶಾಂತಿ ಮತ್ತು ಬಾಲ್ಯದ ನೆನಪುಗಳನ್ನು ಒಳಗೊಂಡಿದೆ.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರ್ಬಿ ಭಾಷೆಯ ಚಿತ್ರ ‘ಕಾಂಗ್ಬೋ ಅಲೋಟಿʼ ಕುರಿತು ನಿರ್ದೇಶಕ ಖಂಜನ್ ಕಿಶೋರ್ ನಾಥ್ ಮಾತನಾಡಿದ್ದಾರೆ.
‘ಕಾಂಗ್ಬೋ ಅಲೋಟಿʼಚಿತ್ರವು ಬೆಂಗಳೂರಿನ ಪ್ರದರ್ಶನಕ್ಕೂ ಮುನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀಮಿಯರ್ ಕಂಡಿದ್ದು, ಯುರೋಪ್ ಮತ್ತು ಭಾರತದ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಗುವಾಹಟಿಯಲ್ಲಿ ನಡೆದ ಏಷ್ಯನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ BIFFES ಈ ಚಿತ್ರದ ಐದನೇ ಪ್ರಮುಖ ಪ್ರದರ್ಶನವಾಗಿದೆ.
ಕನ್ನಡದಲ್ಲಿ ‘ಕಳೆದು ಹೋದ ಹಾದಿʼ ಎಂಬ ಅರ್ಥ ನೀಡುವ ‘ಕಾಂಗ್ಬೋ ಅಲೋಟಿʼ ಚಿತ್ರವು, ನಿರ್ದೇಶಕರ ಬಾಲ್ಯದ ನೆನಪುಗಳು ಮತ್ತು ಜೀವನದ ಅನುಭವಗಳಲ್ಲಿ ಬೇರೂರಿರುವ ವೈಯಕ್ತಿಅನುಭಗಳಾಗಿವೆ.
ʼಈಶಾನ್ಯ ಭಾರತದ ಬಂಡಾಯ ಪೀಡಿತ ಪ್ರದೇಶದಿಂದ ಬಂದಿರುವ ನಾನು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾಮಾಜಿಕ ಅಶಾಂತಿ ಮತ್ತು ಅದು ಸಮುದಾಯಗಳ ಮೇಲೆ ಬೀರುವ ದೀರ್ಘಕಾಲದ ಪರಿಣಾಮಗಳನ್ನು ಕಣ್ಣಾರೆ ಕಂಡೆ. ಈ ನೆನಪುಗಳು ನನ್ನಲ್ಲಿ ಉಳಿದುಕೊಂಡು ಅಂತಿಮವಾಗಿ ಈ ಚಿತ್ರದ ಕಥೆಯನ್ನು ರೂಪಿಸಿದವು. ಈ ಕಥೆ ಸದಾ ಪ್ರಸ್ತುತ ಹಾಗೂ ಸಾರ್ವಕಾಲಿಕʼ ಎಂದು ಅವರು ಅಭಿಪ್ರಾಯಪಟ್ಟರು.
ಚಿತ್ರದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯ ಬಗ್ಗೆ ಮಾತನಾಡಿದ ನಿರ್ದೇಶಕರು,ʼ ಸ್ಥಳೀಯ ಕಥೆಗಳನ್ನು ಪ್ರಾಮಾಣಿಕವಾಗಿ ಹೇಳಿದಾಗ ಅವು ಭೌಗೋಳಿಕ ಗಡಿಗಳನ್ನು ಮೀರಿ ಪ್ರೇಕ್ಷಕರನ್ನು ತಲುಪುತ್ತವೆ ಎಂದು ತಾವು ನಂಬುವುದಾಗಿ ಹೇಳಿದರು.
ಈ ಕಥೆಯು ಅವರ ಸ್ವಂತ ಊರು ಮತ್ತು ವೈಯಕ್ತಿಕ ಇತಿಹಾಸದಿಂದ ಬಂದಿರುವುದರಿಂದ, ಎಲ್ಲ ವರ್ಗದ ಪ್ರೇಕ್ಷಕರಿಗಾಗಿ ಕಥೆಯಲ್ಲಿ ಬದಲಾವಣೆ ಮಾಡುವ ಬದಲು ಅದರ ನೈಜತೆಯನ್ನು ಕಾಪಾಡಿಕೊಳ್ಳಲು ಅವರು ಒತ್ತು ನೀಡಿದ್ದಾರೆ. ಸಿನಿಮೀಯ ಕಲೆ, ದೃಶ್ಯ ಭಾಷೆ ಮತ್ತು ನಿರ್ದೇಶನದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಇಂತಹ ಕಥೆಗಳು ವಿವಿಧ ಸಂಸ್ಕೃತಿಗಳಿಗೆ ತಲುಪಲು ಸಹಾಯ ಮಾಡುತ್ತದೆ. ಒಂದು ಕಥೆ ಎಷ್ಟು ಹೆಚ್ಚು ಸ್ಥಳೀಯವಾಗಿರುತ್ತದೆಯೋ, ಅಷ್ಟು ಹೆಚ್ಚು ಜಾಗತಿಕವಾಗಬಲ್ಲದು ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ʼಹಿಂಸೆ ಅಥವಾ ಬಂದೂಕುಗಳ ಮೂಲಕ ಶಾಶ್ವತ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಿಲ್ಲ, ಬದಲಿಗೆ ಶಿಕ್ಷಣ ಮತ್ತು ಪರಸ್ಪರ ತಿಳುವಳಿಕೆಯಿಂದ ಮಾತ್ರ ಅದು ಸಾಧ್ಯ ಎಂಬ ಸಂದೇಶವನ್ನು ಈ ಚಿತ್ರವು ನೀಡುತ್ತದೆ. ಈ ಆಲೋಚನೆಯನ್ನು ನೇರವಾಗಿ ಹೇಳುವ ಬದಲು ಚಿತ್ರದ ವಿವಿಧ ಪದರಗಳಲ್ಲಿ ಅಡಕಗೊಳಿಸಲಾಗಿದೆ, ಇದರಿಂದ ಪ್ರೇಕ್ಷಕರು ಚಿತ್ರದ ಮೂಲಕ ತಮ್ಮದೇ ಆದ ತೀರ್ಮಾನಕ್ಕೆ ಬರಲು ಅವಕಾಶ ನೀಡಲಾಗಿದೆʼ ಎಂದು ಖಂಜನ್ ಕಿಶೋರ್ ನಾಥ್ ತಿಳಿಸಿದರು.

