
ಎನ್ಐಎ ಅಧಿಕಾರಿಗಳು ಪ್ರಕಟಿಸಿರುವ ಉಗ್ರ ಜುನೈದ್ ಅಹಮದ್ ಭಾವಚಿತ್ರ
ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು: ಶಂಕಿತ ಉಗ್ರ ಜುನೈದ್ ಅಹಮದ್ ಪತ್ತೆಗೆ 5 ಲಕ್ಷ ಬಹುಮಾನ ಪ್ರಕಟ
ಜುನೈದ್ ಅಹಮದ್ನ ಅಪರಾಧ ಲೋಕದ ಪಯಣ ಸಾಮಾನ್ಯ ಕ್ರಿಮಿನಲ್ ಆಗಿ ಆರಂಭವಾಗಿತ್ತಾದರೂ, ಜೈಲುವಾಸ ಈತನನ್ನು ಉಗ್ರಗಾಮಿಯಾಗಿ ಪರಿವರ್ತಿಸಿತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಶಂಕಿತ ಉಗ್ರ, ಮಾಸ್ಟರ್ ಮೈಂಡ್ ಜುನೈದ್ ಅಹಮದ್ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ (NIA) ಬಲೆ ಬೀಸಿದೆ. ತಲೆಮರೆಸಿಕೊಂಡಿರುವ ಈತನ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್ಐಎ ಅಧಿಕೃತವಾಗಿ ಘೋಷಿಸಿದೆ. ಈ ಘೋಷಣೆಯ ಮೂಲಕ ರಾಜ್ಯ ರಾಜಧಾನಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಜೈಲಿನಲ್ಲೇ ಶುರುವಾಗಿದ್ದ ಭಯೋತ್ಪಾದನೆಯ ನಂಟು
ಜುನೈದ್ ಅಹಮದ್ನ ಅಪರಾಧ ಲೋಕದ ಪಯಣ ಸಾಮಾನ್ಯ ಕ್ರಿಮಿನಲ್ ಆಗಿ ಆರಂಭವಾಗಿತ್ತಾದರೂ, ಜೈಲುವಾಸ ಈತನನ್ನು ಉಗ್ರಗಾಮಿಯಾಗಿ ಪರಿವರ್ತಿಸಿತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. 2017ರ ಕೊಲೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಜುನೈದ್ಗೆ, ಅಲ್ಲಿ 2008ರ ಬೆಂಗಳೂರು ಸರಣಿ ಸ್ಫೋಟದ ರೂವಾರಿ ಟಿ. ನಾಸೀರ್ ಭೇಟಿಯಾಗಿತ್ತು. ನಸೀರ್ ಸಂಪರ್ಕಕ್ಕೆ ಬಂದ ನಂತರ ಜುನೈದ್ ಸಂಪೂರ್ಣವಾಗಿ ಮೂಲಭೂತವಾದಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಲಷ್ಕರ್-ಎ-ತೊಯ್ಬಾ ಹ್ಯಾಂಡ್ಲರ್ಗಳ ಸೂಚನೆಯ ಮೇರೆಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದ ಎಂಬ ಗಂಭೀರ ಆರೋಪವಿದೆ.
ಸಿಸಿಬಿ ಕಾರ್ಯಾಚರಣೆ ಮತ್ತು ಸ್ಫೋಟಕಗಳ ಪತ್ತೆ
ಈ ಭೀಕರ ಸಂಚಿನ ಸುಳಿವು ಮೊದಲು ಸಿಕ್ಕಿದ್ದು 2023ರ ಜುಲೈನಲ್ಲಿ. ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗ (CCB) ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಹೆಬ್ಬಾಳ, ಆರ್.ಟಿ. ನಗರ ಮತ್ತು ಕೋಡಿಗೇಹಳ್ಳಿಯ ಐವರು ಶಂಕಿತರನ್ನು ಬಂಧಿಸಲಾಗಿತ್ತು. ಅವರ ಅಡಗುತಾಣಗಳ ಮೇಲೆ ದಾಳಿ ನಡೆಸಿದಾಗ 4 ಸಜೀವ ಗ್ರೆನೇಡ್ಗಳು, 7 ಪಿಸ್ತೂಲುಗಳು, 45 ಸುತ್ತು ಜೀವಂತ ಗುಂಡುಗಳು, ವಾಕಿಟಾಕಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜುನೈದ್ ನೇತೃತ್ವದಲ್ಲಿ ಈ ಗುಂಪು ನಗರದ ವಿವಿಧೆಡೆ ಸ್ಫೋಟ ನಡೆಸಲು ಸಜ್ಜಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿತ್ತು.
ತನಿಖೆ ಚುರುಕುಗೊಳಿಸಿದ ಎನ್ಐಎ ಮತ್ತು ಬಹುಮಾನ ಘೋಷಣೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇದರ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿರುವ ಜುನೈದ್, ಪೊಲೀಸರ ಕಣ್ಣಿಗೆ ಮಣ್ಣೆರಚಲು ಸುಮಾರು ಒಂಬತ್ತು ವಿಭಿನ್ನ ಹೆಸರುಗಳನ್ನು ಬಳಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಆತನಿಗಾಗಿ ಈಗಾಗಲೇ ದೇಶಾದ್ಯಂತ ವ್ಯಾಪಕ ಶೋಧ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜುನೈದ್ ಭಾವಚಿತ್ರವಿರುವ ಪೋಸ್ಟರ್ಗಳನ್ನು ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾಗಿದೆ. ಮಾಹಿತಿ ನೀಡುವವರ ಗುರುತನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ.
ಪೂರಕ ದೋಷಾರೋಪಣೆ
ತನಿಖೆಯನ್ನು ಮುಂದುವರಿಸಿರುವ ಎನ್ಐಎ, ಜನವರಿ 2026ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಜುನೈದ್ ಅಹಮದ್ನ ತಾಯಿ ಅನೀಸ್ ಫಾತಿಮಾ ಸೇರಿದಂತೆ ಇತರರ ಹೆಸರನ್ನು ಸೇರಿಸಲಾಗಿದೆ. ಅನೀಸ್ ಫಾತಿಮಾ ಅವರು ಜೈಲಿನಲ್ಲಿದ್ದ ಟಿ. ನಾಸೀರ್ಗೆ ಆರ್ಥಿಕ ಸಹಾಯ ಮತ್ತು ಸಂವಹನ ಸೌಲಭ್ಯ ಒದಗಿಸುತ್ತಿದ್ದರು ಹಾಗೂ ತನ್ನ ಮಗನ ಸೂಚನೆಯಂತೆ ಸ್ಫೋಟಕಗಳನ್ನು ನಿರ್ವಹಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಜೈಲಿನಲ್ಲಿದ್ದ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ವೈದ್ಯರೊಬ್ಬರ ಪಾತ್ರವನ್ನೂ ತನಿಖಾ ಸಂಸ್ಥೆ ಬಯಲಿಗೆಳೆದಿದೆ.

