
ಸಿಎಸ್ ವಿರುದ್ಧ ಲಂಚದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಸಿಸಿಬಿ ವಶಕ್ಕೆ!
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಕೋಟ್ಯಂತರ ರೂಪಾಯಿ ಲಂಚದ ಆರೋಪ ಮಾಡಿದ್ದ ಮುಡಾ ಪ್ರಕರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದಿದ್ದ ಮುಡಾ ಕೇಸ್‌ಗೆ ಸಂಬಂಧಿಸಿದ ವಿಚಾರಣೆಗಾಗಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಆಗಮಿಸಿದ್ದ ಸ್ನೇಹಮಯಿ ಕೃಷ್ಣ ಅವರನ್ನು ಕೋರ್ಟ್ ಆವರಣದ ಬಳಿಯೇ ಸಿಸಿಬಿ ಪೊಲೀಸರು ಸುತ್ತುವರಿದು ಬಂಧಿಸಿದರು. ಈ ಹಠಾತ್ ಬೆಳವಣಿಗೆಯಿಂದ ಕೋರ್ಟ್ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಮೂಡಿತು. ಕೃಷ್ಣ ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಅವರ ಮಗ ಕೋರ್ಟ್ ವಿಚಾರಣೆಗೆ ಹಾಜರಾದರು.
ನಟೇಶ್ ದೂರಿನ ಮೇರೆಗೆ ಕ್ರಮ
ಮುಡಾ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ಸಿಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕಾನೂನು ಪ್ರಕ್ರಿಯೆ ನಡೆದಿದೆ. ಕೃಷ್ಣ ಅವರು ನಕಲಿ ಆಡಿಯೋ ಕ್ಲಿಪ್ ಸೃಷ್ಟಿಸಿ ಫೇಸ್‌ಬುಕ್‌ನಲ್ಲಿ ಹರಡಿ, ತಮ್ಮ ಘನತೆಗೆ ಕಳಂಕ ತಂದಿದ್ದಾರೆ ಎಂದು ನಟೇಶ್ ದೂರಿನಲ್ಲಿ ತಿಳಿಸಿದ್ದರು. ಐಟಿ ಕಾಯಿದೆ ಸೆಕ್ಷನ್ 66ಎ, ಬಿಎನ್‌ಎಸ್ ಸೆಕ್ಷನ್ 337, 336 ಹಾಗೂ 340ರಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಮೈಸೂರಿನ ಅವರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪದ ಹಿನ್ನೆಲೆ
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಿದ್ದ ಮುಡಾ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ಪ್ರಮುಖ ಅಧಿಕಾರಿ ಎನ್ನಲಾದ ಡಿ.ಬಿ.ನಟೇಶ್ ಅವರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಆಗಿ ಮುಂಬಡ್ತಿ ನೀಡಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿ ಪತ್ರ ಬರೆದಿದ್ದರು. ಅಲ್ಲದೆ, ಮುಡಾ ಹಗರಣವನ್ನು ಮುಚ್ಚಿ ಹಾಕಲು ತಮಗೆ ಹಣದ ಆಮಿಷವೊಡ್ಡಲಾಗಿದೆ ಎಂದೂ ಅವರು ಆರೋಪಿಸಿದ್ದರು.
ಶಾಲಿನಿ ರಜನೀಶ್ ಎಚ್ಚರಿಕೆ, ಬಳಿಕ ಬಂಧನ
ಶಾಲಿನಿ ರಜನೀಶ್ ಅವರು ಗುರುವಾರವಷ್ಟೇ ಸ್ಪಷ್ಟೀಕರಣ ನೀಡಿ, ಯಾವುದೇ ಪೂರಕ ದಾಖಲೆಗಳಿಲ್ಲದೆ ಹಿರಿಯ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡುವುದು ಅಸಮಂಜಸ ಎಂದು ಹೇಳಿದ್ದರು. "ಆಧಾರರಹಿತ ಆರೋಪ ಮಾಡಿದರೆ ಸಹಿಸುವುದಿಲ್ಲ, ಸೂಕ್ತ ಕ್ರಮ ಜರುಗಿಸಲಾಗುವುದು" ಎಂದು ಅವರು ಎಚ್ಚರಿಸಿದ್ದ ಕೇವಲ ಒಂದು ದಿನದೊಳಗೆ ಸ್ನೇಹಮಯಿ ಕೃಷ್ಣ ಬಂಧನ ನಡೆದಿದೆ.
ನಟೇಶ್ ಅವರು ಅವರು ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೂ ದೂರು ಸಲ್ಲಿಸಿದ್ದಾರೆ. ಅದಂತೆಯೇ ಅವರು, ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಆಡಿಯೋ ಕ್ಲಿಪ್ ಅನ್ನು ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

