
ಸಿ.ಜೆ. ರಾಯ್ ಆತ್ಮಹತ್ಯೆ: ಐಟಿ ಅಧಿಕಾರಿಗಳಿಗೆ ಬೆಂಗಳೂರು ಬಿಡದಂತೆ ಎಸ್ಐಟಿ ತಾಕೀತು; ತನಿಖೆ ತೀವ್ರ
ಕೊಚ್ಚಿಯಿಂದ ಆಗಮಿಸಿದ್ದ ಐಆರ್ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡವು ಕಾನ್ಫಿಡೆಂಟ್ ಗ್ರೂಪ್ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ರಾಯ್
ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ದಾಳಿ ನಡೆಸಲು ಬಂದಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಮಹತ್ವದ ಸೂಚನೆ ನೀಡಿದೆ.
ಕೊಚ್ಚಿಯಿಂದ ಆಗಮಿಸಿದ್ದ ಐಆರ್ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡವು ಕಾನ್ಫಿಡೆಂಟ್ ಗ್ರೂಪ್ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ರಾಯ್ ಅವರ ಈ ದುಡುಕಿನ ನಿರ್ಧಾರಕ್ಕೆ ಐಟಿ ಅಧಿಕಾರಿಗಳ ದಾಳಿ ಹಾಗೂ ಅದರಿಂದ ಉಂಟಾದ ಒತ್ತಡವೇ ಕಾರಣವೇ ಅಥವಾ ವ್ಯವಹಾರಿಕ ಹಾಗೂ ವೈಯಕ್ತಿಕ ಸಮಸ್ಯೆಗಳು ಹಿನ್ನೆಲೆಯಾಗಿವೆಯೇ ಎಂಬ ಹಲವು ಆಯಾಮಗಳಲ್ಲಿ ಎಸ್ಐಟಿ ಈಗ ತನಿಖೆ ನಡೆಸುತ್ತಿದೆ. ತನಿಖಾ ದೃಷ್ಟಿಯಿಂದ ಕೊಚ್ಚಿಯ ಐಟಿ ಅಧಿಕಾರಿಗಳ ತಂಡಕ್ಕೆ ಸದ್ಯ ನಗರ ಬಿಟ್ಟು ಹೋಗದಂತೆ ತಾಕೀತು ಮಾಡಲಾಗಿದ್ದು, ಅಗತ್ಯ ಬಿದ್ದರೆ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಎಸ್ಐಟಿ ಮೂಲಗಳು ತಿಳಿಸಿವೆ.
ಪತ್ನಿ ಹಾಗೂ ಮಗಳ ವಿಚಾರಣೆ
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ಅವರ ನೇತೃತ್ವದ ವಿಶೇಷ ತಂಡವು ಶನಿವಾರದಿಂದಲೇ ವಿಚಾರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ವಿಷಯಗಳನ್ನು ಪ್ರಸ್ತಾಪಿಸಿದ್ದರು ಮತ್ತು ರಾಯ್ ಅವರು ಕುಟುಂಬಸ್ಥರ ಬಳಿ ಏನನ್ನು ಹಂಚಿಕೊಂಡಿದ್ದರು ಎಂಬುದನ್ನು ತಿಳಿಯಲು ಸಹೋದರ ಸಿ.ಜೆ. ಬಾಬು ಮತ್ತು ಪುತ್ರ ಮೋಹನ್ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ಪ್ರಕರಣದ ಹೆಚ್ಚಿನ ವಿವರಗಳಿಗಾಗಿ ಸೋಮವಾರದಂದು ರಾಯ್ ಅವರ ಪತ್ನಿ ಹಾಗೂ ಮಗಳನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಘಟನೆಯ ದಿನ ಕಚೇರಿಯಲ್ಲಿದ್ದ ನಿರ್ದೇಶಕರು, ಹಣಕಾಸು ವಿಭಾಗದ ಸಿಬ್ಬಂದಿ ಹಾಗೂ ಆಪ್ತರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ರಾಯ್ ಅವರು ಅಂದು ವಿಪರೀತ ಒತ್ತಡದಲ್ಲಿದ್ದರೇ, ಅವರ ವರ್ತನೆ ಹೇಗಿತ್ತು ಹಾಗೂ ಗುಂಡಿನ ಶಬ್ದ ಯಾರಿಗೂ ಕೇಳಿಸಲಿಲ್ಲವೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ರಾಯ್ ಬಳಸುತ್ತಿದ್ದ ಎರಡು ಐಫೋನ್ಗಳನ್ನು ಜಪ್ತಿ ಮಾಡಲಾಗಿದ್ದು, ದತ್ತಾಂಶ ಮರುಸಂಗ್ರಹಕ್ಕಾಗಿ (Data Recovery) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಅವರು ಯಾರೊಂದಿಗೆ ಮಾತನಾಡಿದ್ದರು ಮತ್ತು ಸಂದೇಶಗಳ ವಿನಿಮಯ ಏನಾಗಿತ್ತು ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಈ ಪ್ರಕರಣದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಪಿಸ್ತೂಲ್. ಸಾಮಾನ್ಯವಾಗಿ ತನಿಖಾ ಸಂಸ್ಥೆಗಳು ಶೋಧಕಾರ್ಯ ನಡೆಸುವಾಗ ಆರೋಪಿಗಳ ಬಳಿಯಿರುವ ಮೊಬೈಲ್ ಮತ್ತು ಶಸ್ತ್ರಾಸ್ತ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ವಶಕ್ಕೆ ಪಡೆಯುತ್ತವೆ. ಆದರೆ, ರಾಯ್ ಅವರ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಪರವಾನಗಿ ಹೊಂದಿದ್ದ ಪಿಸ್ತೂಲ್ ಅನ್ನು ಏಕೆ ವಶಕ್ಕೆ ಪಡೆದಿರಲಿಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಎಸ್ಐಟಿ ಪಿಸ್ತೂಲ್ ಮತ್ತು ಲ್ಯಾಪ್ಟಾಪ್ ಅನ್ನು ವಶಕ್ಕೆ ಪಡೆದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ.
ಕಾನ್ಫಿಡೆಂಟ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯಾವ ಒತ್ತಡ ರಾಯ್ ಅವರನ್ನು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ, ತನಿಖಾ ವರದಿ ಬರುವವರೆಗೂ ಊಹಾಪೋಹಗಳಿಗೆ ಎಡೆಮಾಡಿಕೊಡುವ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಸಿ.ಜೆ. ರಾಯ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಭಾನುವಾರ ಮಧ್ಯಾಹ್ನದವರೆಗೆ ಕಾನ್ಫಿಡೆಂಟ್ ಕ್ಯಾಸ್ಕೇಡ್ನ ರಾಯಲ್ ಹಾಲ್ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ರಾಜಕಾರಣಿಗಳು ಮತ್ತು ಕುಟುಂಬಸ್ಥರ ಅಂತಿಮ ನಮನದ ನಂತರ, 'ನೇಚರ್ಸ್ ಲಕ್ಸುರಿ ರೆಸಾರ್ಟ್' ಆವರಣದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

