ಅಂತರ್​​ಧರ್ಮೀಯ ಮದುವೆ ಗುಟ್ಟು ಮುಚ್ಚಿಟ್ಟಿದ್ದೇ ಟೆಕ್ಕಿ ದಂಪತಿಗಳ ದುರಂತ ಅಂತ್ಯಕ್ಕೆ ಕಾರಣವಾಯಿತೇ?
x

ಅಂತರ್​​ಧರ್ಮೀಯ ಮದುವೆ ಗುಟ್ಟು ಮುಚ್ಚಿಟ್ಟಿದ್ದೇ ಟೆಕ್ಕಿ ದಂಪತಿಗಳ ದುರಂತ ಅಂತ್ಯಕ್ಕೆ ಕಾರಣವಾಯಿತೇ?

ಟೆಕ್ಕಿಗಳು ಪ್ರೀತಿಸಿ ಮದುವೆಯಾಗಿದ್ದರೂ, ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರಿಂದ ಕುಟುಂಬದ ವಿರೋಧ ಕಟ್ಟಿಕೊಳ್ಳುವ ಭಯದಿಂದ ಮದುವೆ ವಿಚಾರವನ್ನು ಸಂಪೂರ್ಣವಾಗಿ ಗುಟ್ಟಾಗಿಟ್ಟಿದ್ದರು ಎನ್ನಲಾಗಿದೆ.


Click the Play button to hear this message in audio format

ಬೆಂಗಳೂರಿನ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಭಾನುಚಂದ್ರ ರೆಡ್ಡಿ ಹಾಗೂ ಬಿಬಿ ಶಾಜಿಯಾ ಸಿರಾಜ್ ಅವರ ಸರಣಿ ಆತ್ಮಹತ್ಯೆ ಪ್ರಕರಣವು ಇದೀಗ ಹೊಸದೊಂದು ಕೋನದಲ್ಲಿ ಚರ್ಚೆಯಾಗುತ್ತಿದೆ. ಪರಸ್ಪರ ಪ್ರೀತಿಸಿ ಅಂತರ್ಧರ್ಮೀಯ ವಿವಾಹವಾಗಿದ್ದ ಈ ಜೋಡಿಯು, ತಮ್ಮ ಮದುವೆಯ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದೇ ಇಂಥದ್ದೊಂದು ಭೀಕರ ದುರಂತಕ್ಕೆ ದಾರಿ ಮಾಡಿಕೊಟ್ಟಿತೇ ಎಂಬ ಅನುಮಾನಗಳು ದಟ್ಟವಾಗಿವೆ.

ಉದ್ಯೋಗ ನಷ್ಟದ ಜೊತೆಗೆ ಕುಟುಂಬಸ್ಥರಿಗೆ ಸತ್ಯ ತಿಳಿಸಲಾಗದ ಅಸಹಾಯಕತೆಯೇ ಇಬ್ಬರನ್ನೂ ಮಾನಸಿಕವಾಗಿ ಕುಗ್ಗಿಸಿ ಸಾವಿನ ದವಡೆಗೆ ನೂಕಿದೆ ಎಂಬ ವಿಶ್ಲೇಷಣೆಗಳು ಪೊಲೀಸ್ ತನಿಖೆ ಹಾಗೂ ಸ್ಥಳೀಯರ ವಲಯದಲ್ಲಿ ಕೇಳಿಬರುತ್ತಿವೆ.

ಗುಟ್ಟಾಗಿಯೇ ಉಳಿದಿದ್ದ ಅಂತರ್ಧರ್ಮೀಯ ವಿವಾಹ

ತೆಲಂಗಾಣ ಮೂಲದವರಾದ ಇವರಿಬ್ಬರೂ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಉತ್ತಮ ಹುದ್ದೆಗಳಲ್ಲಿದ್ದರು. ಭಾನುಚಂದ್ರ ರೆಡ್ಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೆ, ಶಾಜಿಯಾ ಬೆಂಗಳೂರಿನ ಐಬಿಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರೂ, ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರಿಂದ ಕುಟುಂಬದ ವಿರೋಧ ಕಟ್ಟಿಕೊಳ್ಳುವ ಭಯದಿಂದ ಮದುವೆ ವಿಚಾರವನ್ನು ಸಂಪೂರ್ಣವಾಗಿ ಗುಟ್ಟಾಗಿಟ್ಟಿದ್ದರು ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಥಣಿಸಂದ್ರ ಮುಖ್ಯರಸ್ತೆಯ ಭಾರತಿಸಿಟಿಯ ನಿಕಿಹೋಮ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಈ ದಂಪತಿ, ಸಮಾಜದ ಕಣ್ಣಿಗೆ ಒಟ್ಟಿಗೆ ಬದುಕುತ್ತಿದ್ದರು. ಆದರೆ, ಕುಟುಂಬದವರ ಮುಂದೆ ತಾವು ಅಧಿಕೃತವಾಗಿ ಮದುವೆಯಾಗಿರುವ ಸತ್ಯವನ್ನು ಬಾಯಿಬಿಡುವ ಧೈರ್ಯವನ್ನು ಕೊನೆಯವರೆಗೂ ಮಾಡಿರಲಿಲ್ಲ.

ಪೋಷಕರ ಒತ್ತಡ ಹಾಗೂ ಉದ್ಯೋಗ ನಷ್ಟದ ತಳಮಳ

ಶಾಜಿಯಾ ಅವರ ಕುಟುಂಬವು ರಾಜಕೀಯ ಹಿನ್ನೆಲೆ ಹೊಂದಿದ್ದು, ಆಕೆಯ ಮದುವೆ ವಿಚಾರ ಅರಿಯದ ಪೋಷಕರು ಆಕೆಗೆ ಬೇರೊಂದು ಸಂಬಂಧ ಕೂಡಿ ತರುವ ಭರಪೂರ ಸಿದ್ಧತೆಯಲ್ಲಿದ್ದರು. ಇದು ಶಾಜಿಯಾ ಅವರನ್ನು ತೀವ್ರ ಮಾನಸಿಕ ತೊಳಲಾಟಕ್ಕೆ ಸಿಲುಕಿಸಿತ್ತು. ಮತ್ತೊಂದೆಡೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಪ್ರಭಾವದಿಂದಾಗಿ ಭಾನುಚಂದ್ರ ರೆಡ್ಡಿ ತಮ್ಮ ಅಮೆರಿಕದ ಕೆಲಸ ಕಳೆದುಕೊಂಡು ಭಾರತಕ್ಕೆ ಮರಳಿದ್ದರು. ಇಲ್ಲಿಯೂ ಸೂಕ್ತ ಕೆಲಸ ಸಿಗದೆ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಂದೆಡೆ ಸತ್ಯ ಬಾಯಿಬಿಡಲಾಗದ ಒದ್ದಾಟ, ಇನ್ನೊಂದೆಡೆ ಪೋಷಕರು ತರುತ್ತಿದ್ದ ಸಂಬಂಧಗಳ ಒತ್ತಡ ಹಾಗೂ ಉದ್ಯೋಗದ ಅಭದ್ರತೆ ಇಬ್ಬರ ನಡುವೆ ತೀವ್ರ ಕೌಟುಂಬಿಕ ಕಲಹಗಳಿಗೆ ಕಾರಣವಾಗಿತ್ತು. ಪೋಷಕರಿಗೆ ಸತ್ಯ ಹೇಳಿ ಒಪ್ಪಿಸಿದ್ದರೆ ಬಹುಶಃ ಇಂತಹ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ನೈತಿಕ ಬೆಂಬಲ ಸಿಗುತ್ತಿತ್ತೇನೋ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಸತ್ಯ ಹೇಳಲಾಗದ ಅಸಹಾಯಕತೆಯೇ ಬಲಿತೆಗೆದುಕೊಂಡಿತೇ?

ಈ ಎಲ್ಲ ಮಾನಸಿಕ ಒತ್ತಡಗಳ ಹಾಗೂ ಖಿನ್ನತೆಯ ನಡುವೆ, ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಭಾನುಚಂದ್ರ ರೆಡ್ಡಿ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಶಾಜಿಯಾ, ಆ ನೋವು ಹಾಗೂ ಮುಂದೇನು ಎಂಬ ಭಯ, ಕುಟುಂಬಕ್ಕೆ ಮುಖ ತೋರಿಸಲಾಗದ ಅಸಹಾಯಕತೆಯಿಂದಾಗಿ ಅಪಾರ್ಟ್ಮೆಂಟ್‌ನ ಬಹುಮಹಡಿ ಕಟ್ಟಡದಿಂದ ಜಿಗಿದು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆರಂಭದಲ್ಲೇ ಕುಟುಂಬಕ್ಕೆ ಸತ್ಯ ತಿಳಿಸಿದ್ದರೆ, ಕನಿಷ್ಠ ಈ ಮಟ್ಟದ ಖಿನ್ನತೆ ಅಥವಾ ಇಬ್ಬರೂ ಪ್ರಾಣ ಕಳೆದುಕೊಳ್ಳುವ ಭೀಕರ ನಿರ್ಧಾರಕ್ಕೆ ಮುಂದಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕೊತ್ತನೂರು ಪೊಲೀಸರು ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮದುವೆ ಮುಚ್ಚಿಟ್ಟಿದ್ದರ ಹಿಂದಿನ ನಿಖರ ಕಾರಣಗಳು ಹಾಗೂ ಕೌಟುಂಬಿಕ ಒತ್ತಡಗಳ ಬಗ್ಗೆ ವಿಸ್ತೃತ ತನಿಖೆ ಕೈಗೊಂಡಿದ್ದಾರೆ.

ಗಂಡ-ಹೆಂಡತಿ ಇಬ್ಬರೂ ಕೂಡ ಐಬಿಎಂ ನಲ್ಲಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದಷ್ಟೇ ಕೊತ್ತನೂರಿನ ಅಪಾರ್ಟ್​​ಮೆಂಟ್​​ನಲ್ಲಿ ಬಂದು ವಾಸವಾಗಿದ್ದರು. ಅಂತರ್ಧಮೀಯ ವಿವಾಹವಾಗಿದ್ದ ದಂಪತಿ ಮಧ್ಯೆ ನಡುವೆ ಆಗಾಗ್ಗೆ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಇದರಿಂದ ಇಬ್ಬರೂ ಕೂಡ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. ಎರಡೂ ಕುಟುಂಬದವರ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೊತ್ತನೂರು ಠಾಣೆ ಇನ್ಸ್ ಸ್ಪೆಕ್ಟರ್ ಚೇತನ್ ಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

Read More
Next Story