2022-23ರಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ 24.82 ಕೋಟಿ ಮಂದಿ ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ಹೇಳಿದೆ.

ನೀತಿ ಆಯೋಗದ ಅಧ್ಯಯನ ಲೇಖನದ ಪ್ರಕಾರ, ದೇಶದಲ್ಲಿ ದೀರ್ಘಾವಧಿ ಬಡತನವು 2013-14 ರಲ್ಲಿ ಶೇ.29.17 ರಿಂದ 2022-23 ರಲ್ಲಿ ಶೇ. 11.28 ಕ್ಕೆ ಇಳಿದಿದೆ ಮತ್ತು ಈ ಅವಧಿಯಲ್ಲಿ ಸರಿಸುಮಾರು 24.82 ಕೋಟಿ ಜನ ಬಡತನದಿಂದ ಪಾರಾಗಿದ್ದಾರೆ.


ದೀರ್ಘಾವಧಿ ಬಡತನವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಕೊರತೆಗಳನ್ನು ಏಕಕಾಲದಲ್ಲಿ ಅಳೆಯುತ್ತದೆ. ಇದನ್ನು 12 ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕಗಳು ಪ್ರತಿನಿಧಿಸುತ್ತವೆ. ಪೌಷ್ಟಿಕತೆ, ಮಗು ಮತ್ತು ತಾಯಿಯ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲೆಗೆ ಹಾಜರಿ, ಅಡುಗೆ ಇಂಧನ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಇದರಲ್ಲಿ ಸೇರಿವೆ. ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ(ಎಂಪಿಐ)ವು ಅಭಾವದ ಮಟ್ಟವನ್ನು ನಿರ್ಧರಿಸಲು ಅಲ್ಕೈರ್ ಫಾಸ್ಟರ್ ವಿಧಾ ನವನ್ನು ಬಳಸುತ್ತದೆ. ರಾಷ್ಟ್ರೀಯ ಎಂಪಿಐ 12 ಸೂಚ್ಯಂಕಗಳನ್ನು ಒಳಗೊಂಡಿದ್ದರೆ, ಜಾಗತಿಕ ಎಂಪಿಐ 10 ಸೂಚ್ಯಂಕಗಳನ್ನು ಒಳ ಗೊಂಡಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ 5.94 ಕೋಟಿ, ಬಿಹಾರ 3.77 ಕೋಟಿ (2ನೇ ಸ್ಥಾನ) ಮತ್ತು ಮಧ್ಯಪ್ರದೇಶದಲ್ಲಿ 2.30 ಕೋಟಿ ಜನ ಬಡತನದಿಂದ ಬಿಡುಗಡೆ ಹೊಂದಿದ್ದಾರೆ.

ನೀತಿ ಆಯೋಗದ ಸಿಇಒ ಬಿ.ವಿ. ಸುಬ್ರಹ್ಮಣ್ಯಂ ಅವರ ಪ್ರಕಾರ, ದೀರ್ಘಕಾಲದ ಬಡತನವನ್ನು ಶೇ.1 ಕ್ಕಿಂತ ಹೆಚ್ಚು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. 2013-14 ರಿಂದ 2022-23 ರವರೆಗೆ ತೀವ್ರ ಬಡತನದ ಪ್ರಮಾಣ ಕುಸಿದಿದೆ. ಇದಕ್ಕೆ ಸರ್ಕಾರದ ಉಪಕ್ರಮಗಳು ಮತ್ತು ಯೋಜನೆಗಳು ಕಾರಣ. ದೇಶ ಸುಸ್ಥಿರ ಅಭಿವೃದ್ಧಿ ಗುರಿ(ಎಸ್ಡಿಜಿ) ಗಳನ್ನುಸಾಧಿಸುವ ಉತ್ತಮ ಅವಕಾಶ ಹೊಂದಿದೆ.

Next Story