Gautam Adani Case | ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಲಂಚ, ವಂಚನೆ ಆರೋಪ
ಹೂಡಿಕೆದಾರರು ಹಾಗೂ ಬ್ಯಾಂಕುಗಳಿಗೆ ಸುಳ್ಳು ಮಾಹಿತಿ ನೀಡಿ, ಕೋಟ್ಯಂತರ ಡಾಲರ್ ಸಂಗ್ರಹಿಸುವುದು ಮತ್ತು ಕಾನೂನು ಪ್ರಾಧಿಕಾರಗಳನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಉಪ ಸಹಾಯಕ ಅಟಾರ್ನಿ ಲಿಸಾ ಮಿಲ್ಲರ್ ಆರೋಪಿಸಿದ್ದಾರೆ
ಭಾರತದ ದೈತ್ಯ ಉದ್ಯಮಿ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ (Gautam Adani) ವಿರುದ್ಧ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯೂಯಾರ್ಕ್ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅಮೆರಿದಕ ತಮ್ಮ ಕಂಪನಿಯೊಂದಕ್ಕೆ ಗುತ್ತಿಗೆ ಪಡೆಯಲು 250 ಮಿಲಿಯನ್ ಡಾಲರ್ (1640 ಕೋಟಿ ರೂ.) ಲಂಚ ನೀಡಿದ ಆರೋಪ ಅವರ ಮೇಲಿದೆ. ಗೌತಮ್ ಅದಾನಿ ಮತ್ತು ಇತರೆ ಏಳು ಮಂದಿ ನಿರ್ದೇಶಕರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಸೌರ ಶಕ್ತಿ ಯೋಜನೆಯ ಗುತ್ತಿಗೆ ಪಡೆಯಲು ಭಾರತ ಸರ್ಕಾರದ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ಗೂ ಅಧಿಕ ಲಂಚದ ಆಮಿಷವನ್ನು ಅದಾನಿ ಒಡ್ಡಿದ್ದಾರೆ ಎಂಬುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಆರೋಪಿಗಳಲ್ಲಿ ಗೌತಮ್ ಅದಾನಿ ಅವರ ಸೋದರ ಸಂಬಂಧಿ ಸಾಗರ್ ಅದಾನಿ ಕೂಡ ಸೇರಿದ್ದಾನೆ. ಈ ಸುದ್ದಿಯಾದ ಬಳಿಕ ಅದಾನಿ ಷೇರುಗಳು ಏಕಾಏಕಿ ಕುಸಿದಿದ್ದು ಗುರುವಾರ ಷೇರು ಪೇಟೆ ಆರಂ ಭಗೊಂಡಾಗ ಶೇ. 20ರಷ್ಟು ಕುಸಿತ ಕಂಡಿತ್ತು.
ಹೂಡಿಕೆದಾರರು ಹಾಗೂ ಬ್ಯಾಂಕುಗಳಿಗೆ ಸುಳ್ಳು ಮಾಹಿತಿ ನೀಡಿ, ಕೋಟ್ಯಂತರ ಡಾಲರ್ ಸಂಗ್ರಹಿಸುವುದು ಮತ್ತು ಕಾನೂನು ಪ್ರಾಧಿಕಾರಗಳನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಉಪ ಸಹಾಯಕ ಅಟಾರ್ನಿ ಲಿಸಾ ಮಿಲ್ಲರ್ ಆರೋಪಿಸಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ಅದಾನಿಯವರ ಹೆಸರಿನ ಬದಲು ದೊಡ್ಡ ಮನುಷ್ಯ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಅದಾನಿಯಾಗಲಿ, ಅಥವಾ ಅದಾನಿ ಸಂಸ್ಥೆಯಾಗಲಿ ಉತ್ತರಿಸಿಲ್ಲ.
ಯೋಜನೆಯ ಗುತ್ತಿಗೆ ಪಡೆಯಲು ಖುದ್ದು ಗೌತಮ್ ಅದಾನಿ ಭಾರತದ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ಮಾತುಕತೆ ನಡೆಸಿ ಲಂಚ ಕೊಡುವ ಆಮಿಷ ಒಡ್ಡಿದ್ದರು ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
2023 ರಲ್ಲಿ ಹಿಂಡ್ಬರ್ಗ್ ವರದಿಯು ಅದಾನಿ ವಿರುದ್ಧ ವಂಚನೆಯ ಆರೋಪಗಳನ್ನು ಮಾಡಿತ್ತು. ಆ ಘಟನೆಯ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು. ಇದೀಗ ಮತ್ತೆ ಅದಾನಿ ಕಂಪನಿಗಳು ಮೋಸದ ಆರೋಪವನ್ನು ಹೊತ್ತುಕೊಳ್ಳುವಂತಾಗಿದೆ.
ವಿಶ್ವ ದೊಡ್ಡ ಶ್ರೀಮಂತ
62 ವರ್ಷದ ಗೌತಮ್ ಅದಾನಿ ವಿಶ್ವದ 22 ನೇ ಶ್ರೀಮಂತ ಹಾಗೂ ಭಾರತದ ಎರಡನೇ ಶ್ರೀಮಂತ ವ್ಯಕ್ತಿ. 1988 ರಲ್ಲಿ ಅದಾನಿ ಗ್ರೂಪ್ ಅನ್ನು ವ್ಯಾಪಾರ ಸಂಸ್ಥೆಯಾಗಿ ಸ್ಥಾಪಿಸಿದ ಅವರು ವಿಮಾನ ನಿಲ್ದಾಣಗಳು, ಬಂದರು, ವಿದ್ಯುತ್ ಉತ್ಪಾದನೆ, ಶಕ್ತಿ ಪ್ರಸರಣ ಮತ್ತು ಗಣಿಗಾರಿಕೆ ಕಂಪನಿಗಳನ್ನು ಒಳಗೊಂಡ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.