
Iran-Israel War Imapct| ಕರುನಾಡಿನ ಹೆಮ್ಮೆಯ ʼನಂದಿನಿʼ, ʼಸ್ಯಾಂಡಲ್ʼ ಸೋಪಿಗೂ ತಟ್ಟಿದ ಯುದ್ಧದ ಬಿಸಿ; ರಫ್ತು ಸ್ಥಗಿತ
ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಹಾಗೂ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಸರಕು ಸಾಗಣೆ ಹಡಗುಗಳು ಆಫ್ರಿಕಾ ಖಂಡ ಬಳಸಿ ಬರಬೇಕಾಗಿದೆ. ಇದರಿಂದ ಪ್ರಯಾಣದ ಸಮಯ 15 ರಿಂದ 20 ದಿನಗಳಷ್ಟು ಹೆಚ್ಚಾಗಲಿದೆ.
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಉಲ್ಬಣಿಸಿರುವ ಯುದ್ಧದ ಪರಿಸ್ಥಿತಿ ಕರ್ನಾಟಕಕ್ಕೆ ಹೊಡೆತ ನೀಡಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ರಾಜ್ಯದ ಉದ್ಯಮಗಳ ಮೇಲೂ ಪರಿಣಾಮ ಬೀರುತ್ತಿದೆ. ಅದರಲ್ಲೂ ರಾಜ್ಯದ ಹೆಮ್ಮೆ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸೋಪ್ ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ರಫ್ತಿಗೆ ತೊಡಕಾಗಿದೆ.
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಉತ್ಪನ್ನಗಳಿಗೆ ಮಧ್ಯಪ್ರಾಚ್ಯದಲ್ಲಿ ಉತ್ತಮ ಬೇಡಿಕೆಯಿದೆ. ಮೈಸೂರು ಸ್ಯಾಂಡಲ್ ಸೋಪ್ ಅನ್ನು ಸೌದಿ ಅರೇಬಿಯಾದಲ್ಲಿ ಹೆಚ್ಚು ಬಳಸುತ್ತಾರೆ. ಅದೇ ರೀತಿ ದುಬೈ, ಅಬುಧಾಬಿ, ಕುವೈತ್, ಕತಾರ್, ಬಹ್ರೇನ್ ಹಾಗೂ ಓಮನ್ ದೇಶಗಳಲ್ಲೂ ಕೆಎಸ್ಡಿಎಲ್ ಉತ್ಪನ್ನಗಳು ಜನಪ್ರಿಯವಾಗಿವೆ. ಇದೇ ಕಾರಣಕ್ಕೆ ಮೈಸೂರು ಸ್ಯಾಂಡಲ್ ಸೋಪಿನ ಪ್ರಚಾರ ರಾಯಭಾರಿಯನ್ನಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಜ್ಯ ಸರ್ಕಾರ ನೇಮಿಸಿತ್ತು.
ಗುಣಮಟ್ಟ ಹಾಗೂ ಶ್ರೇಷ್ಠತೆಗೆ ಹೆಸರಾಗಿರುವ ಮೈಸೂರು ಸ್ಯಾಂಡಲ್ ಸೋಪ್ ಅನ್ನು ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರು ಹೆಚ್ಚು ಬಳಸುತ್ತಿರುವುದರಿಂದ ರಫ್ತು ಮಾಡಲಾಗುತ್ತಿದೆ. ಈಗ ಯುದ್ಧದ ಕಾರಣದಿಂದ ರಫ್ತು ಸ್ಥಗಿತಗೊಂಡಿದ್ದು, ನಿಗಮಕ್ಕೆ ಸುಮಾರು 4 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಕೆಎಸ್ಡಿಎಲ್ ಮೂಲಗಳು ಹೇಳಿವೆ.
“ಯುದ್ಧದ ಹಿನ್ನಲೆಯಲ್ಲಿ ಕೆಎಸ್ ಡಿಎಲ್ ಉತ್ಪನ್ನಗಳ ರಫ್ತಿಗೆ ಸಮಸ್ಯೆಯಾಗಿದೆ. ಸೋಪು ಸೇರಿದಂತೆ ಹಲವು ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೇಡಿಕೆಯಿದೆ. ಈಗ ರಪ್ತುಮಾಡಿರುವ ಉತ್ಪನ್ನವಿರುವ ಕಂಟೇನರ್ ಚೆನ್ನೈ ಬಂದರಿನಲ್ಲಿ ನಿಂತಿದೆ. ಸರಕು ಸಾಗಣೆಯಾಗದ ಕಾರಣ ಕೋಟ್ಯಂತರ ರೂ,ಗಳಷ್ಟು ರಫ್ತಿಗೆ ಹೊಡೆತ ಬಿದ್ದಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಎಂ ಪ್ರಶಾಂತ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೆಎಸ್ಡಿಎಲ್ ವಾರ್ಷಿಕ ವಹಿವಾಟಿನಲ್ಲಿ ರಫ್ತು ಪ್ರಮಾಣ ಗಮನಾರ್ಹವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಾರ್ಷಿಕ ಸುಮಾರು 30 ಕೋಟಿ ರೂ.ಗಳಿಗೂ ಹೆಚ್ಚುಮೌಲ್ಯದ ಉತ್ಪನ್ನಗಳು ರಫ್ತಾಗುತ್ತವೆ. ಇದಲ್ಲದೇ ಬೇರೆ ದೇಶಗಳಿಗೆ ವಾರ್ಷಿಕವಾಗಿ ಅಂದಾಜು 100 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ರಫ್ತು ಆಗುತ್ತಿವೆ. ಪ್ರಸ್ತುತ, ಇರಾನ್ -ಇಸ್ರೇಲ್ ಸಂಘರ್ಷದ ತೀವ್ರತೆಯಿಂದಾಗಿ ಶೇ 20 ರಿಂದ 30 ರಷ್ಟು ರಫ್ತು ಆರ್ಡರ್ಗಳು ಕಡಿಮೆಯಾಗಿವೆ ಎಂದು ಕೆಎಸ್ಡಿಎಲ್ ಮೂಲಗಳು ತಿಳಿಸಿವೆ.
ನಂದಿನಿ ತುಪ್ಪ
ನಂದಿನಿಗೂ ತಟ್ಟಿದ ಯುದ್ಧದ ಬಿಸಿ
ಇರಾನ್ -ಇಸ್ರೇಲ್ ನಡುವಿನ ಸಂಘರ್ಷದ ಬಿಸಿ ಕರ್ನಾಟಕದ ಹಾಲು ಮಹಾಮಂಡಳಕ್ಕೂ ತಟ್ಟಿದೆ. ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಆಗಿರುವ 'ನಂದಿನಿ' ಉತ್ಪನ್ನಗಳ ರಫ್ತಿನ ಮೇಲೆ ಮಧ್ಯಪ್ರಾಚ್ಯದ ತ್ವೇಷಮಯ ವಾತಾವರಣ ಗಂಭೀರ ಪರಿಣಾಮ ಬೀರಿದೆ.
ಕರ್ನಾಟಕದ ನಂದಿನಿ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅನಿವಾಸಿ ಕನ್ನಡಿಗರಿಂದ ಭಾರೀ ಬೇಡಿಕೆ ಇದೆ. ಸೌದಿ ಅರೇಬಿಯಾ, ದುಬೈ, ಕುವೈತ್, ಕತಾರ್, ಓಮನ್ ಹಾಗೂ ಬಹ್ರೇನ್ ದೇಶಗಳಲ್ಲಿ ನಂದಿನಿ ತುಪ್ಪ, ಗುಡ್ಲೈಫ್ ಟೆಟ್ರಾ ಪ್ಯಾಕ್ ಹಾಲು, ಹಾಲಿನ ಪುಡಿ, ಪನೀರ್ ಹಾಗೂ ಸುವಾಸಿತ ಹಾಲು ಮತ್ತು ಸಿಹಿ ತಿನಿಸುಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ, ಯುದ್ಧದ ಪರಿಸ್ಥಿತಿಯಿಂದ ಕೆಎಂಎಫ್ ಉತ್ಪನ್ನಗಳ ರಫ್ತಿಗೂ ತೊಂದರೆಯಾಗಿದೆ.
"ಕಳೆದ ಹಲವು ವರ್ಷಗಳಿಂದ ತಿಂಗಳಿಗೊಮ್ಮೆ ದುಬೈಗೆ 15 ಟನ್ ತುಪ್ಪ ರಫ್ತು ಮಾಡಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ತುಪ್ಪದ ಜತೆಗೆ ಒಂದು ಟನ್ ಸಿಹಿ ತಿನಿಸನ್ನೂ ಕಳುಹಿಸಲಾಗಿತ್ತು. ಯುದ್ಧ ಆರಂಭಕ್ಕೂ ಮೊದಲೇ ತುಪ್ಪ ಹಾಗೂ ಸಿಹಿ ತಿಂಡಿಗಳನ್ನು ರಫ್ತು ಮಾಡಿದ್ದೆವು. ಸರಕುಗಳು ಯಾವುದೇ ತೊಂದರೆ ಇಲ್ಲದಂತೆ ವಿತರಕರಿಗೆ ತಲುಪಿದೆ. ಆದರೆ, ಯುದ್ಧ ಆರಂಭದ ನಂತರ ಯಾವುದೇ ಹೊಸ ಆರ್ಡರ್ಗಳು ಬರುತ್ತಿಲ್ಲ. ಇದರಿಂದ ನಂದಿನಿ ಉತ್ಪನ್ನಗಳ ರಫ್ತಿಗೆ ಸಮಸ್ಯೆಯಾಗಿದೆ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಳೆದ ಫೆಬ್ರವರಿಯಲ್ಲಿ ಸೌದಿ ಅರೇಬಿಯಾಗೆ ಸುಮಾರು 8 ಟನ್ ತುಪ್ಪ ರಫ್ತು ಮಾಡಲು ಒಪ್ಪಂದ ಸಹ ಮಾಡಿಕೊಳ್ಳಲಾಗಿತ್ತು. ಇನ್ನು ಹಾಲಿನ ಉತ್ಪನ್ನಗಳು ಬಳಕೆಯ ಅವಧಿ ಹೊಂದಿರುವುದರಿಂದ ಸಕಾಲಕ್ಕೆ ತಲುಪದಿದ್ದರೆ ಹಾಳಾಗುವ ಭೀತಿ ಎದುರಾಗಿದೆ. ಸದ್ಯ ಅಂತಹ ಪರಿಸ್ಥಿತಿ ಬಂದಿಲ್ಲ, ಒಂದೊಮ್ಮೆ ಯುದ್ಧ ಮುಂದುವರಿದರೆ ಹೊಸ ಆರ್ಡರ್ಗಳು ಕಡಿಮೆಯಾಗಿ, ಸಂಸ್ಥೆಗೆ ನಷ್ಟವಾಗಲಿದೆ ಎನ್ನಲಾಗಿದೆ.
ನಂದಿನಿ ಉತ್ಪನ್ನಗಳ ರಫ್ತಿಗೆ ವಾಯುಮಾರ್ಗ ಬಳಸುವುದರಿಂದ ವೆಚ್ಚ ದುಬಾರಿಯಾಗಲಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಯಾವುದೇ ಆರ್ಡರ್ ಸ್ವೀಕರಿಸದಿರಲು ನಿರ್ಧರಿಸಲಾಗಿದೆ. ರಫ್ತಿಗೆ ಸಿದ್ಧವಾಗಿದ್ದ ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ಕೆಎಂಎಫ್ ತೀರ್ಮಾನಿಸಿದೆ.
ರಫ್ತಿಗೆ ಎದುರಾದ ಸಮಸ್ಯೆಗಳೇನು?
ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಹಾಗೂ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಸರಕು ಸಾಗಣೆ ಹಡಗುಗಳು ಆಫ್ರಿಕಾ ಖಂಡ ಬಳಸಿ ಬರಬೇಕಾಗಿದೆ. ಇದರಿಂದ ಪ್ರಯಾಣದ ಸಮಯ 15 ರಿಂದ 20 ದಿನಗಳಷ್ಟು ಹೆಚ್ಚಾಗಲಿದೆ. ಅಲ್ಲದೇ ಸಾರಿಗೆ ವೆಚ್ಚ, ಮಾರ್ಗ ಬದಲಾವಣೆಯಿಂದ ಇಂಧನ ವೆಚ್ಚ ಮತ್ತು ವಿಮೆಯ ವೆಚ್ಚವೂ ಗಗನಕ್ಕೇರಿದೆ. ಇದು ರಫ್ತಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ.
ಸಕಾಲಕ್ಕೆ ಉತ್ಪನ್ನಗಳು ಮಾರುಕಟ್ಟೆಗೆ ತಲುಪದ ಕಾರಣ ವಿತರಕರು ಮತ್ತು ಗ್ರಾಹಕರಲ್ಲಿ ಸಹಜವಾಗಿ ಅಸಮಾಧಾನ ಮೂಡಲಿದೆ. ಕರ್ನಾಟಕದಿಂದ ವಿವಿಧ ಉತ್ಪನ್ನಗಳನ್ನು ಮಧ್ಯಪ್ರಾಚ್ಯದ ದೇಶಗಳಿಗೆ ಸಾಗಿಸುವ ಕಂಟೇನರ್ ತುಂಬಿದ ಹಡಗುಗಳು ಯುದ್ಧದ ಭೀತಿಯಿಂದ ಬಂದರಿಗೆ ವಾಪಸ್ ಆಗುತ್ತಿರುವುದು ಸಂಸ್ಥೆಗಳಿಗೆ ನಷ್ಟ ತಂದೊಡ್ಡಿದೆ.

