ಭಾನುವಾರ ಮಂಡಿಸಲಾದ 2026-27ನೇ ಸಾಲಿನ ಬಜೆಟ್ನಲ್ಲಿ ಈಕ್ವಿಟಿ ಡೆರಿವೇಟಿವ್ಗಳ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳದ ಘೋಷಣೆಯು ಮಾರುಕಟ್ಟೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿತ್ತು.
ಕೇಂದ್ರ ಬಜೆಟ್ ಮಂಡನೆಯ ದಿನದಂದು (ಭಾನುವಾರ) ಭಾರೀ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ. ಪ್ರಮುಖ ಕಂಪನಿಗಳ ಷೇರುಗಳಲ್ಲಿ ಕಂಡುಬಂದ 'ವ್ಯಾಲ್ಯೂ ಬೈಯಿಂಗ್' (ಕಡಿಮೆ ಬೆಲೆಗೆ ಉತ್ತಮ ಷೇರುಗಳ ಖರೀದಿ) ಪ್ರಕ್ರಿಯೆಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೇಲೇರಿವೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 302 ಪಾಯಿಂಟ್ಸ್ಗಳಷ್ಟು ಏರಿಕೆ ಕಂಡು 81,024.94 ಕ್ಕೆ ತಲುಪಿದೆ. ಇತ್ತ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 59.25 ಪಾಯಿಂಟ್ಸ್ಗಳಷ್ಟು ಹೆಚ್ಚಳವಾಗಿ 24,884.70 ಕ್ಕೆ ತಲುಪಿದೆ.
ಲಾಭ-ನಷ್ಟದ ಲೆಕ್ಕಾಚಾರ
ಸೆನ್ಸೆಕ್ಸ್ ಪಟ್ಟಿಯಲ್ಲಿ ಅದಾನಿ ಪೋರ್ಟ್ಸ್, ಲಾರ್ಸೆನ್ ಅಂಡ್ ಟೂಬ್ರೊ (L&T), ಏಷ್ಯನ್ ಪೇಂಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಎಟರ್ನಲ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿವೆ. ಮತ್ತೊಂದೆಡೆ ಟ್ರೆಂಟ್, ಟೈಟಾನ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಆರಂಭಿಕ ಹಿನ್ನಡೆ ಅನುಭವಿಸಿವೆ.
ಭಾನುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದರು. ಈಕ್ವಿಟಿ ಡೆರಿವೇಟಿವ್ಗಳ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳದ ಘೋಷಣೆಯು ಮಾರುಕಟ್ಟೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿತ್ತು. ಭಾನುವಾರದ ವಿಶೇಷ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೋಬ್ಬರಿ 1,546.84 ಪಾಯಿಂಟ್ಸ್ (ಶೇ. 1.88) ಕುಸಿಯುವ ಮೂಲಕ 80,722.94 ಕ್ಕೆ ಅಂತ್ಯಗೊಂಡಿತ್ತು. ನಿಫ್ಟಿ ಕೂಡ 495.20 ಪಾಯಿಂಟ್ಸ್ (ಶೇ. 1.96) ಇಳಿಕೆಯಾಗಿ 24,825.45 ಕ್ಕೆ ಸ್ಥಿರವಾಗಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾನುವಾರ ಒಂದೇ ದಿನ 588.34 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿಅಂಶಗಳು ತಿಳಿಸಿವೆ.
ಜಾಗತಿಕ ಮಾರುಕಟ್ಟೆ ಸ್ಥಿತಿಗತಿ
ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕೊರಿಯಾದ ಕಾಸ್ಪಿ ಶೇ. 4 ರಷ್ಟು ಕುಸಿದರೆ, ಜಪಾನ್ನ ನಿಕ್ಕಿ ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಕೂಡ ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಕೂಡ ನಷ್ಟದೊಂದಿಗೆ ಅಂತ್ಯಗೊಂಡಿದ್ದವು. ಇದೇ ವೇಳೆ, ಜಾಗತಿಕ ತೈಲ ಬೆಲೆಯಲ್ಲಿ (ಬ್ರೆಂಟ್ ಕ್ರೂಡ್) ಶೇ. 4.14 ರಷ್ಟು ಇಳಿಕೆಯಾಗಿದ್ದು, ಬ್ಯಾರೆಲ್ಗೆ 66.45 ಡಾಲರ್ಗೆ ತಲುಪಿದೆ.


