ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ, ಆಫ್‌ಶೋರ್ ಫಂಡ್‌ಗಳಲ್ಲಿ ಬಹಿರಂಗಪಡಿಸದ ಹೂಡಿಕೆಗಳನ್ನು ಮಾಡಿದ್ದಾರೆ ಎಂದು ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದ ನಂತರ, ಸೋಮವಾರ ಆರಂಭಿಕ ವಹಿವಾಟಿನಲ್ಲಿ 10 ಅದಾನಿ ಸ್ಟಾಕ್‌ಗಳ ಮೌಲ್ಯ ಕುಸಿದಿದೆ.

ಈ ಹೂಡಿಕೆಯನ್ನು ವಿನೋದ್ ಅದಾನಿ ಅವರು ಬರ್ಮುಡಾ ಮತ್ತು ಮಾರಿಷಸ್‌ನಲ್ಲಿ ರೌಂಡ್ ಟ್ರಿಪ್ ನಿಧಿಗಳಲ್ಲಿ ಮತ್ತು ಸ್ಟಾಕ್ ಬೆಲೆಗಳನ್ನು ಹೆಚ್ಚಿಸಲು ಬಳಸಿದ್ದಾರೆ ಎಂದು ಹಿಂಡೆನ್‌ಬರ್ಗ್‌ ವರದಿ ಹೇಳಿದೆ.

ಅದಾನಿ ಎನರ್ಜಿ ಸಲ್ಯೂಷನ್ಸ್ ಗರಿಷ್ಠ ಶೇ. 17, ಅದಾನಿ ಟೋಟಲ್ ಗ್ಯಾಸ್ ಶೇ. 13.39, ಎನ್‌ಡಿಟಿವಿ ಶೇ. 11, ಅದಾನಿ ಪವರ್ ಬಿಎಸ್‌ಇ ಶೇ. 10.94, ಅದಾನಿ ಗ್ರೀನ್ ಎನರ್ಜಿ ಶೇ. 6.96, ಅದಾನಿ ವಿಲ್ಮರ್ ಶೇ.6.49, ಅದಾನಿ ಎಂಟರ್‌ಪ್ರೈಸಸ್ ಶೇ. 5.43, ಅದಾನಿ ಪೋರ್ಟ್ಸ್ ಶೇ.4.95, ಅಂಬುಜಾ ಸಿಮೆಂಟ್ಸ್ ಶೇ. 2.53 ಮತ್ತು ಎಸಿಸಿ ಸಿಮೆಂಟ್ಸ್‌ ಶೇ. 2.42 ರಷ್ಟು ಕುಸಿದಿದೆ.

ಇದರೊಟ್ಟಿಗೆ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 479.78 ಹಾಗೂ ಎನ್‌ಎಸ್‌ಇ ನಿಫ್ಟಿ 155.4 ಪಾಯಿಂಟ್‌ ಕುಸಿದಿವೆ.

ಹಿಂಡೆನ್‌ಬರ್ಗ್‌ ಆರೋಪ: ಹಿಂಡೆನ್‌ಬರ್ಗ್ ರಿಸರ್ಚ್ ಶನಿವಾರ (ಆಗಸ್ಟ್ 10) ಸೆಬಿ ಅಧ್ಯಕ್ಷೆ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್‌ನ ಕಡಲಾಚೆಯ ನಿಧಿಗಳಲ್ಲಿ ಬಹಿರಂಗಪಡಿಸದ ಹೂಡಿಕೆ ಮಾಡಿದ್ದಾರೆ. ಅದೇ ಸಂಸ್ಥೆಗಳನ್ನು ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಸಹೋದರ ವಿನೋದ್ ಅದಾನಿ ಬಳಸಿಕೊಂಡು ನಿಧಿಗಳು ಮತ್ತು ಸ್ಟಾಕ್ ಬೆಲೆಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ದೂರಿತ್ತು.

ಅದಾನಿ ವಿಷಯಕ್ಕೆ ಸಂಬಂಧಿಸಿದ ಹೂಡಿಕೆ ನಿಧಿಗಳ ತನಿಖೆಯನ್ನು ಸೆಬಿಗೆ ವಹಿಸಲಾಗಿದೆ. ಇದರಲ್ಲಿ ಮಾಧಬಿ ಬುಚ್ ಅವರ ವೈಯಕ್ತಿಕ ಹೂಡಿಕೆಗಳೂ ಸೇರಿವೆ. ಇದು ನಿಸ್ಸಂಶಯವಾಗಿ ಭಾರಿ ಹಿತಾಸಕ್ತಿ ಸಂಘರ್ಷ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ.

ಸೆಬಿ ಮೇಲೆ ದಾಳಿ: ಮಾಧಬಿ ಪುರಿ ಬುಚ್ ಮತ್ತು ಅವರ ಪತಿ, ʻಹಿಂಡೆನ್‌ಬರ್ಗ್‌ನ ಇತ್ತೀಚಿನ ವರದಿಯು ಸೆಬಿಯ ವಿಶ್ವಾಸಾರ್ಹತೆ ಮೇಲಿನ ದಾಳಿ ಮತ್ತು ಅವಮಾನಿಸುವ ಪ್ರಯತ್ನʼ ಎಂದು ಕರೆದಿದ್ದಾರೆ. ತಾವು 2017 ರಲ್ಲಿ ಸೆಬಿಗೆ ಸದಸ್ಯರಾಗಿ ಮತ್ತು ಮಾರ್ಚ್ 2022 ರಲ್ಲಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು 2015ರಲ್ಲಿ ಈ ಹೂಡಿಕೆಗಳನ್ನು ಮಾಡಲಾಗಿದೆ. ಆಗ ಸಿಂಗಾಪುರದಲ್ಲಿ ವಾಸಿಸುವ ಖಾಸಗಿ ನಾಗರಿಕರಾಗಿದ್ದೆವು. ಸೆಬಿಗೆ ನೇಮಕಗೊಂಡ ಬಳಿಕ ಈ ಖಾತೆಗಳು ನಿಷ್ಕ್ರಿಯವಾದವು ಎಂದು ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಭಾನುವಾರ (ಆಗಸ್ಟ್ 11) ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Next Story