ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೌಲ್ಯ ಶೇಕಡಾ 11ಕ್ಕೂ ಹೆಚ್ಚು ಕುಸಿದಿದ್ದರೆ, ಕಾಮೆಕ್ಸ್ ಬೆಳ್ಳಿ ದರವು ಶೇಕಡಾ 31ಕ್ಕೂ ಹೆಚ್ಚು ಭಾರೀ ಕುಸಿತ ಕಂಡಿದೆ

Click the Play button to hear this message in audio format

ವಾರದ ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ಹೂಡಿಕೆದಾರರನ್ನು ಹುಬ್ಬೇರಿಸುವಂತೆ ಮಾಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಶುಕ್ರವಾರ ಕಂಡ ಭಾರೀ ಕುಸಿತದ ನಂತರ ಇದೀಗ ಕೊಂಚ ಚೇತರಿಸಿಕೊಂಡು ಸ್ಥಿರತೆ ಕಾಯ್ದುಕೊಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದೌರ್ಬಲ್ಯದ ನಡುವೆಯೂ, ಶನಿವಾರ (ಜ.31) ದೇಶದ ಪ್ರಮುಖ ನಗರಗಳಲ್ಲಿ ಹಳದಿ ಲೋಹದ ಬೆಲೆಗಳು ಒಂದೇ ಹಂತದಲ್ಲಿ ವಹಿವಾಟು ನಡೆಸಿವೆ.

ಶುಕ್ರವಾರ ಒಂದೇ ದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕಂಡುಬಂದ ತೀವ್ರ ಏರುಪೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮೂಡಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೌಲ್ಯ ಶೇಕಡಾ 11ಕ್ಕೂ ಹೆಚ್ಚು ಕುಸಿದಿದ್ದರೆ, ಕಾಮೆಕ್ಸ್ ಬೆಳ್ಳಿ ದರವು ಶೇಕಡಾ 31ಕ್ಕೂ ಹೆಚ್ಚು ಭಾರೀ ಕುಸಿತ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ, ಬೆಳ್ಳಿಯ ದರವು ತನ್ನ ದಾಖಲೆಯ ಗರಿಷ್ಠ ಮಟ್ಟವಾದ ಪ್ರತಿ ಔನ್ಸ್‌ಗೆ 121.755 ಡಾಲರ್‌ಗಿಂತ ಸುಮಾರು ಶೇಕಡಾ 35ರಷ್ಟು ಕೆಳಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ದೆಹಲಿಯಲ್ಲೇಷ್ಟು?

ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಚಿನ್ನದ ದರ ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 16,934 ರೂಪಾಯಿಗಳಷ್ಟಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 15,524 ರೂಪಾಯಿಗಳಷ್ಟಿದೆ. ಇನ್ನು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,704 ರೂಪಾಯಿಗಳಿಗೆ ತಲುಪಿದೆ. ಇದೇ ವೇಳೆ, ದೆಹಲಿಯಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 3,94,900 ರೂಪಾಯಿಗಳಂತೆ ವಹಿವಾಟು ನಡೆಸುತ್ತಿದೆ. ಈ ವರ್ಷದ ಆರಂಭದಿಂದಲೂ ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದರಿಂದ ಬೆಲೆ ಏರುಮುಖವಾಗಿಯೇ ಸಾಗಿತ್ತು.

ಮುಂಬೈ- ಬೆಂಗಳೂರಿನಲ್ಲಿ ಕಡಿಮೆ

ವಾಣಿಜ್ಯ ನಗರಿ ಮುಂಬೈ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ದರಗಳು ದೆಹಲಿಗಿಂತ ಕೊಂಚ ಕಡಿಮೆಯಾಗಿವೆ. ಈ ಎರಡೂ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 16,919 ರೂಪಾಯಿಗಳಾಗಿದ್ದು, 22 ಕ್ಯಾರೆಟ್ ಚಿನ್ನ 15,509 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. 18 ಕ್ಯಾರೆಟ್ ಚಿನ್ನದ ಬೆಲೆ 12,689 ರೂಪಾಯಿಗಳಷ್ಟಿದೆ. ಬೆಳ್ಳಿ ದರದಲ್ಲೂ ಈ ನಗರಗಳು ದೆಹಲಿಯ ದರವನ್ನೇ (ಪ್ರತಿ ಕೆಜಿಗೆ 3,94,900 ರೂ.) ಕಾಯ್ದುಕೊಂಡಿವೆ. ಕೋಲ್ಕತ್ತಾದ ಮಾರುಕಟ್ಟೆಯಲ್ಲೂ ಇದೇ ದರಗಳು ಮುಂದುವರಿದಿವೆ.

ಹೈದರಾಬಾದ್ ಮಾರುಕಟ್ಟೆಯಲ್ಲಿ ಚಿನ್ನದ ದರವು ಮುಂಬೈ ಮತ್ತು ಬೆಂಗಳೂರಿನ ದರಗಳನ್ನೇ ಹೋಲುತ್ತದೆಯಾದರೂ, ಬೆಳ್ಳಿ ದರದಲ್ಲಿ ಮಾತ್ರ ಏರಿಕೆ ಕಂಡುಬಂದಿದೆ. ಇಲ್ಲಿ ಬೆಳ್ಳಿಯ ದರವು ಪ್ರತಿ ಕೆಜಿಗೆ 4,04,900 ರೂಪಾಯಿಗಳಷ್ಟಿದ್ದು, ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ದುಬಾರಿಯಾಗಿದೆ. ಒಟ್ಟಾರೆಯಾಗಿ, ವಾರಾಂತ್ಯದಲ್ಲಿ ಬೆಲೆಗಳು ಸ್ಥಿರವಾಗಿರುವುದು ಆಭರಣ ಪ್ರಿಯರಿಗೆ ಹಾಗೂ ಸಣ್ಣ ಹೂಡಿಕೆದಾರರಿಗೆ ಸದ್ಯದ ಮಟ್ಟಿಗೆ ನಿರಾಳತೆಯನ್ನು ತಂದಿದೆ.

Next Story