ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಪರಿಷ್ಕರಣೆಯಾಗಬಹುದು ಎಂಬ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಯ ಏರುಪೇರು ಹಾಗೂ ಭಾರೀ ಇಳಿಕೆಗೆ ಕಾರಣ ಎನ್ನಲಾಗಿದೆ.

ವಿತ್ತ ಸಚಿವರಾದ ಕೇಂದ್ರ ನಿರ್ಮಲಾ ಸೀತಾರಾಮನ್​ ಅವರು ಬಜೆಟ್ ಮಂಡನೆ ಮಾಡುವ ಮುನ್ನವೇ ಆಭರಣ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾನುವಾರದಂದು ಅಂತಾ ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏಕಾಏಕಿ ಶೇ. 9ರಷ್ಟು ಕುಸಿದಿದೆ. ಇದು ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಐತಿಹಾಸಿಕ ಕುಸಿತ ಎಂದು ಹೇಳಲಾಗಿದೆ.

ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಪರಿಷ್ಕರಣೆಯಾಗಬಹುದು ಎಂಬ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಯ ಏರುಪೇರು ಹಾಗೂ ಭಾರೀ ಇಳಿಕೆಗೆ ಕಾರಣ ಎನ್ನಲಾಗಿದೆ.

ಭಾನುವಾರದ ವಹಿವಾಟಿನಲ್ಲಿ ಚಿನ್ನದ ದರವು ಪ್ರತಿ 10 ಗ್ರಾಂಗೆ ಬರೋಬ್ಬರಿ 13,711 ರೂಪಾಯಿ ಕುಸಿತ ಕಂಡು 1,38,634 ರೂಪಾಯಿಗೆ ತಲುಪಿದೆ. ಅದ ಮಾದರಿಯಲ್ಲಿ ಬೆಳ್ಳಿ ದರದಲ್ಲೂ ಭಾರೀ ಇಳಿಕೆ ಕಂಡಿದ್ದು, ಪ್ರತಿ ಕೆ.ಜಿಗೆ 26,273 ರೂಪಾಯಿ ರಷ್ಟು ಕುಸಿಯುವ ಮೂಲಕ 2,65,652 ರೂಪಾಯಿ ತಲುಪಿದೆ. ಅಂತೆಯೇ ಭಾನುವಾರದ ಆರಂಭಿಕ ವಹಿವಾಟಿನಲ್ಲಿ ಶೇ. 6ರಷ್ಟು ಕುಸಿದಿದ್ದ ಬೆಳ್ಳಿ, ನಂತರ ಚೇತರಿಸಿಕೊಂಡಿಲ್ಲ.

ಐತಿಹಾಸಿಕ ಕುಸಿತ ಕಂಡ ಮಾರುಕಟ್ಟೆ

ಶುಕ್ರವಾರದ ವಹಿವಾಟಿನ ಕೊನೆಯಲ್ಲಿ ಚಿನ್ನ ಬೆಲೆ ಶೇ. 12ರಷ್ಟು ಮತ್ತು ಬೆಳ್ಳಿ ಶೇ. 37ರಷ್ಟು ಕುಸಿತ ಕಂಡಿತ್ತು. ಇದು 1990ರ ದಶಕದ ಆರಂಭದ ನಂತರ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಆದ ಅತಿದೊಡ್ಡ ಕುಸಿತ. ಶನಿವಾರ ಮಾರುಕಟ್ಟೆಗೆ ರಜೆ ಇದ್ದಿದ್ದರಿಂದ ದರ ಇಳಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ, ಭಾನುವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಮತ್ತೆ ದರ ಇಳಿಕೆ ಕಂಡಿದೆ.

ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ಮೇಲೆ ಶೇ. 6ರಷ್ಟು ಮೂಲ ಅಬಕಾರಿ ಸುಂಕ ಮತ್ತು ಶೇ. 3ರಷ್ಟು ಜಿಎಸ್‌ಟಿ ಸೇರಿ ಒಟ್ಟು ಶೇ. 9ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಈ ಹಿಂದೆ ಶೇ. 15 ರಷ್ಟಿದ್ದ ಸುಂಕವನ್ನು ಶೇ. 9ಕ್ಕೆ ಇಳಿಸಲಾಗಿತ್ತು.

ಇಂದಿನ ಬಜೆಟ್‌ನಲ್ಲಿ ಮೂಲ ಸುಂಕವನ್ನು ಶೇ. 6ರಿಂದ ಶೇ. 4ಕ್ಕೆ ಇಳಿಕೆ ಮಾಡಬಹುದು ಎಂಬ ಬಲವಾದ ಊಹಾಪೋಹ ಮಾರುಕಟ್ಟೆಯಲ್ಲಿದೆ. ಒಂದು ವೇಳೆ ಸರ್ಕಾರ ಸುಂಕ ಇಳಿಕೆ ಘೋಷಿಸಿದರೆ ಮತ್ತು ಜಾಗತಿಕ ಮಾರುಕಟ್ಟೆ ಸ್ಥಿರವಾಗಿದ್ದರೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇನ್ನೂ 2,000 (ಪ್ರತಿ 10 ಗ್ರಾಂ) ಹಾಗೂ ಬೆಳ್ಳಿ ದರ 6,000 (ಪ್ರತಿ ಕೆ.ಜಿ) ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Next Story