ʼಕಿಸಾನ್‌ ಸತ್ಯಾಗ್ರಹ ʼ  ಸಾಕ್ಷ್ಯಾಚಿತ್ರಕ್ಕೆ  I&B ಯಿಂದ ಅವಕಾಶ ನಿರಾಕರಣೆ:  ವಿವಾದದ ಸುಳಿಯಲ್ಲಿ Biffes ಸಿನಿ ಉತ್ಸವ
x

ʼಕಿಸಾನ್‌ ಸತ್ಯಾಗ್ರಹ ʼ ಸಾಕ್ಷ್ಯಾಚಿತ್ರಕ್ಕೆ I&B ಯಿಂದ ಅವಕಾಶ ನಿರಾಕರಣೆ: ವಿವಾದದ ಸುಳಿಯಲ್ಲಿ Biffes ಸಿನಿ ಉತ್ಸವ


ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಷ್ಟು ವರ್ಷಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ವಿವಾದದಲ್ಲಿ ಸಿಲುಕಿಕೊಂಡಿದೆ. ಆದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಘಟಿಸಲಾಗಿದ್ದರೂ, ಯಾವುದೇ ವಿವಾದಕ್ಕೆ 15ನೇ ಆವೃತ್ತಿ ಸಿಕ್ಕಿಕೊಳ್ಳುವುದಿಲ್ಲ. ಈ ವರ್ಷದ ರಾಷ್ಟ್ರೀಯ ಸಿನಿಮಾ ಹಬ್ಬ ವಿವಾದರಹಿತ ಚಿತ್ರೋತ್ಸವ ಎಂಬ ಹೆಗ್ಗಳಿಕೆ ಪಡೆಯುತ್ತದೆ ಎಂಬ ಭಾವನೆ ಇತ್ತು.

ಆದರೆ ಆ ನಂಬಿಕೆ ಸುಳ್ಳಾಗಿದೆ. ಚಿತ್ರೋತ್ಸವ ಆರಂಭವಾದ ಮೊದಲ ದಿನವೇ ವಿವಾದಗ್ರಸ್ತವಾಗಿದೆ. ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದೆಂದು ಪ್ರಕಟಿಸಲಾಗಿದ್ದ ಎರಡು ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಅನುಮತಿಯನ್ನು ನಿರಾಕರಿಸಿದೆ.

ಆಶ್ಚರ್ಯದ ಸಂಗತಿಯೆಂದರೆ ಹೆಸರಾಂತ ನಿರ್ದೇಶಕ ಕೇಸರಿ ಹರವೂ ನಿರ್ಮಾಣದ ʼಕಿಸಾನ್‌ ಸತ್ಯಾಗ್ರಹʼ ಹಾಗೂ ಉಕ್ರೇನ್‌ ನಿರ್ದೇಶಕ ಮಿಸ್ತಿಸ್ಲೇವ್‌ ಷೆರ್ನೋವ್‌ ನಿರ್ದೇಶನದ ʼ20 ಡೇಸ್‌ ಇನ್‌ ಮ್ಯಾರಿಪೋಲ್‌ʼ ಎಂಬ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಅನುಮತಿಯನ್ನು ನಿರಾಕರಿಸಿರುವುದು ಚಲನಚಿತ್ರ ಸಮುದಾಯವನ್ನು ಕೆರಳಿಸಿದೆ.

ತಮ್ಮ ಚಿತ್ರವನ್ನು ಪ್ರದರ್ಶಿಸಲು ಅಸಹಾಯಕತೆ ವ್ಯಕ್ತ ಪಡಿಸಿರುವ ಚಿತ್ರೋತ್ಸವ ಆಯ್ಕೆ ಸಮಿತಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಸರಿ ಹರವೂ ಅವರು ಹೇಳಿಕೆ ಹೀಗಿದೆ;

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ʼಕಿಸಾನ್‌ ಸತ್ಯಾಗ್ರಹʼವನ್ನು ಕೈಬಿಟ್ಟಿದೆ. ಈ ಚಿತ್ರಕ್ಕೆ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿಲ್ಲ ಎನ್ನುವುದೇ ಕಾರಣ ಎಂದು ಕೆಲವರು ತಿಳಿದಿದ್ದಾರೆ ಎನ್ನಿಸುತ್ತಿದೆ. ಇನ್ನು ಕೆಲವರು ʼಮುಂಜಾಗ್ರತೆ ವಹಿಸಿ ಪ್ರಮಾಣ ಪತ್ರ ಪಡೆಯಬೇಕಿತ್ತಲ್ಲವೇ? ಎಂದೂ ಭಾವಿಸಿರಬಹುದು. ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಮಾಣ ಪತ್ತ ಪಡೆದ ಚಿತ್ರಗಳನ್ನಷ್ಟೇ ಪ್ರದರ್ಶಿಸಬೇಕು ಎನ್ನುವ ನಿಯಮವಿಲ್ಲ (ತೀರಾ ಇತ್ತೀಚಿನ ಬೆಳವಣಿಗೆಗಳು ಏನೋ ಅದು ನನಗೆ ಗೊತ್ತಿಲ್ಲ.) ಆದರೆ ಪ್ರಮಾಣ ಪತ್ರ ಪಡೆಯದ ಚಿತ್ರಗಳನ್ನು ಪ್ರದರ್ಶಿಸುವಾಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಮುನ್ನೋಪ್ಪಿಗೆ ಪಡೆಯಬೇಕು. ಅದೊಂದು ಔಪಚಾರಿಕತೆ. ಇನ್ನು ಭಾರತದಲ್ಲಿ ನಿರ್ಮಾಣವಾಗುವ ಬಹುತೇಕ ಸಾಕ್ಷ್ಯಾಚಿತ್ರಗಳು ಪ್ರಮಾಣ ಪತ್ರ ಪಡೆಯುವುದಿಲ್ಲ. ನಮ್ಮ ವರ್ತಾ ಇಲಾಖೆ ಮತ್ತುಇ ತರೆ ಇಲಾಖೆಗಳು, ಅಲ್ಲದೇ ದೇಶದ ಹಲವಾರು ಸಂಸ್ಥೆಗಳು ನಿರ್ಮಿಸುವ ಸಕ್ಷ್ಯಾ ಚಿತ್ರಗಳಿಗೆ ಪ್ರಮಾಣ ಪತ್ರ ಪಡೆಯುವುದಿಲ್ಲ. ಅಂತಹ ಅನೇಕ ಚಿತ್ರಗಳು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ. ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿಸಲ್ಲಿಸುವ ಸಾಕ್ಷ್ಯಾ ಚಿತ್ರಗಳು ಪ್ರಮಾಣ ಪತ್ರ ಹೊಂದಿರಬೇಕು ಎನ್ನುವ ನಿಯಮವನ್ನು ಕೆಲವು ವರ್ಷಗಳ ಹಿಂದೆ ಸರ್ಕಾರ ತಂದಾಗ ಆನಂದ್‌ ಪಟವರ್ಧನ್‌ ಸೇರಿದಂತೆ ಹಲವಾರು ನಿರ್ದೇಶಕರು ಪ್ರತಿಭಟಿಸಿದರು. ಕೊನೆಗೆ ಪ್ರಶಸ್ತಿಗಾಗಿ ಚಿತ್ರ ಕಳುಹಿಸುವುದನ್ನೇ ನಿಲ್ಲಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಮುನ್ನೋಪ್ಪಿಗೆ ಪಡೆಯಬೇಕು ಎನ್ನುವ ಈ ಔಪಚಾರಿಕ ನಿಯಮ ಭಾರತದಲ್ಲಿ ಪ್ರಮಾಣ ಪತ್ರ ಪಡೆಯದ ವಿದೇಶಿ ಚಿತ್ರಗಳಿಗೂ ಇದೆ. ಏಕೆಂದರೆ ಈ ಎಲ್ಲ ಚಿತ್ರಗಳು ಭಾರತದಲ್ಲಿ ಪ್ರದರ್ಶನಗೊಳ್ಳುವುದಿಲ್ಲ. ಹಾಗಾಗಿ ನಮ್ಮ ದೇಶದ ಪ್ರಮಾಣ ಪತ್ರ ಪಡೆಯುವುದಿಲ್ಲ. ಹಾಗಾಗಿಯೇ , ನಮ್ಮ ಚಿತ್ರೋತ್ಸವಗಳಲ್ಲಿ ನೂರಾರು ವಿದೇಶಿ ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.

ಇನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಈ ಬಾರಿಯ Biffes ನಲ್ಲಿ ಪ್ರದರ್ಶನಗೊಳ್ಳಲು ಮೂರು ಚಿತ್ರಗಳಿಗೆ ಅನುಮತಿ ನಿರಾಕರಿಸಲಾಗಿದೆ. ಇಸ್ರೇಲ್‌ ನ ಒಂದು ಚಿತ್ರ, ಉಕ್ರೇನ್‌ ನ ಒಂದು ಚಿತ್ರ ಮತ್ತು ಭಾರತದ ನಮ್ಮ ಚಿತ್ರ. ಇದು Biffes ನ ಒಬ್ಬ ಜವಾಬ್ದಾರಿಯುತ ಸಂಘಟಕರಿಂದಲೇ ಬಂದ ಮಾಹಿತಿ. ಅವರ ಪ್ರಕಾರ ಈ ಔಪಚಾರಿಕ ನಿಯಮ ಈ ತಿರುವು ಪಡೆಯುತ್ತದೆ ಎಂದು ಅವರಿಗೂ ತಿಳಿದಿರಲಿಲ್ಲ ಎಂದು ತೋರುತ್ತದೆ. ತಿಳಿದಿದ್ದರೆ ಅವರೇಕೆ ಚಿತ್ರೋತ್ಸವದ ಚಿತ್ರಗಳ ಕ್ಯಾಟಲಾಗ್‌ ಪುಸ್ತಕದಲ್ಲಿ, ವೆಬ್ಸೈಟ್ನಲ್ಲಿ ನಮ್ಮ ಚಿತ್ರದ ವಿವರಗಳನ್ನು ಪ್ರಕಟಿಸುತ್ತಿದ್ದರು?

ಇಸ್ರೇಲ್‌-ಪ್ಯಾಲೆಸ್ತಿನ್ ನ ಮೇಲೆ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ , ಇಸ್ರೇಲ್ ನ ಒಂದು ಚಿತ್ರವನ್ನು, ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಆ ಕುರಿತ ಚಿತ್ರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ತಡೆದಿದೆ. ಅದೇ ರೀತಿ ರೈತರ ಮಾನವ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಈ ಸಂದರ್ಭದಲ್ಲಿ ಒಬ್ಬ ನಿರ್ದೇಶಕನ ಚಿತ್ರವನ್ನು ತಡೆಯುವುದು, ಆ ಮೂಲಕ ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಮಾಡುವುದು ಅಚ್ಚರಿ ಏನಲ್ಲ.

ನಮ್ಮ ಚಿತ್ರಕ್ಕೆ ಪ್ರಮಾಣೀಕರಣ ಆಗಿಲ್ಲ. ಹಾಗಾಗಿ ಚಿತ್ರೋತ್ಸವದಿಂದ ಹೊರಗಿಡಲಾಗಿದೆ ಎಂಬ ಕಥನ ಅಥವಾ Narrative ಬದಲಾಗಿ ಈ ದೇಶಕಾಲದ ಸಂದರ್ಭವನ್ನು ದಯವಿಟ್ಟು ನೋಡಿ ಎಂದು ಕೇಸರಿ ಹರವೂ ವಿನಂತಿ ಮಾಡಿಕೊಂಡಿದ್ದಾರೆ.

ಕೇಸರಿ ಹರವೂ ಅವರ ವಿನಂತಿಯಲ್ಲಿ ಬಹು ಅರ್ಥ ವಿದೆ. ಕಿಸಾನ್‌ ಸತ್ಯಾಗ್ರಹ ದೇಶ ಕಂಡ ಐತಿಹಾಸಿಕ ಚಳವಳಿಯ ಸಾಕ್ಷ್ಯಾಚಿತ್ರ. ಈ ಚಿತ್ರ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರದರ್ಶನ ಕಂಡಾಗ ಈ ಬರಹಗಾರನೊಂದಿಗೆ ಮಾತನಾಡಿದ್ದ ಕವಿ ಹೃದಯದ ಚಿತ್ರ ನಿರ್ದೇಶಕ ಕೇಸರಿ ಹರವೂ “ ವೇಶಧರಿಸಿದವೇಶಧಾರಿಗಳು ಹೊರಕ್ಕೆಪ್ರಗತಿಯಮಾತು ಒಳಕ್ಕೆವಿಗತಿಯಪಾತಾಳಕ್ಕೆ ಕುಸಿಯುವರು......ಎಂದು ಹೇಳಿ ಮುಗುಳ್ನಕ್ಕಿದ್ದರು.

ಇಂದಿನ ರೈತ ಚಳುವಳಿಯ ಸ್ಥಿತಿಯ ಬಗ್ಗೆ ಅವರ ಅನಿಸಿಕೆ ಇದು. ಕೇಸರಿ ಹರವೂ ತಮ್ಮ ʼಭೂಮಿ ಗೀತʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು. ಕರ್ನಾಟಕದ ನೆಲ-ಜಲ-ತಳಸಮುದಾಯದ ಸಂಸ್ಕೃತಿಗಳನ್ನು ಕುರಿತು ಅನೇಕ ಸಾಕ್ಷ್ಯಾ ಚಿತ್ರಗಳನ್ನು ನಿರ್ಮಿಸಿದವರು. ಕರ್ನಾಟಕದ ರೈತಚಳವಳಿಯನ್ನು ಹತ್ತಿರದಿಂದ ನೋಡಿ, ದೂರದಲ್ಲಿ ನಿಂತು ವಿಶ್ಲೇಷಿಸಿದವರು. ಕಿಸಾನ್‌ ಸತ್ಯಾಗ್ರಹ ಚಿತ್ರವನ್ನು ಆರಂಭದ ಹಂತದಲ್ಲಿ ದೆಹಲಿಯ ಪ್ರತಿಕೂಲ ವಾತಾವರಣ ಹಾಗೂ ಕೇಂದ್ರ ಸರ್ಕಾರದ ದಮನ ನೀತಿಗಳನ್ನು ಎದುರಿಸಿ ದಿಟ್ಟವಾಗಿ ನಿರ್ದೇಶಿಸಿದವರು. ಈ ಐತಿಹಾಸಿಕ ಚಳವಳಿ ಇಡೀ ವಿಶ್ವದ ಗಮನವನ್ನು ಸೆಳೆಯುವಂತೆ ಮಾಡಿದವರು. ದೇಶದ ರೈತರ ಆತ್ಮಸಾಕ್ಷಿಯಂಥ ಸಂಗತಿಯನ್ನು ಜಗತ್ತಿನ ಮುಂದಿರಿಸಿ, ಆತ್ಮರಹಿತ ಕೇಂದ್ರ ಸರ್ಕಾರದ ದಮನ ನೀತಿಯನ್ನು ಖಂಡಿಸಿದವರು. ದೇಶದ ಕೆಸರಿನಲ್ಲಿ ಹೂತ ರೈತನ ಕಾಲುಗಳು ಆಳುವವರ ಅಂಗಳಕ್ಕೆ ಇಳಿದಾಗ, ಸಮಾಜದ ಸಾಕ್ಷಿ ಪ್ರಜ್ಞೆಯಂತಿರುವ ನಿರ್ದೇಶಕ ಮೌನವಾಗಿರಲು ಸಾಧ್ಯವಿಲ್ಲ ಎಂದು ಕ್ಯಾಮರಾ ಹೊತ್ತು, ಹೊರಟವರು. ಮುಳ್ಳು ಬೇಲಿಗಳನ್ನು ನಿರ್ಮಿಸಿ, ರಸ್ತೆಗಳಲ್ಲಿ ಮೊಳೆಗಳನ್ನು ನೆಟ್ಟು ರೈತರ ರಕ್ತ ಹೀರಲು ಸಜ್ಜಾದವರ, ಲಾಟಿ ಏಟನ್ನು ಎದುರಿಸಿ ಚಿತ್ರೀಕರಿಸಿದ ಸಾಕ್ಷ್ಯಾ ಚಿತ್ರವಿದು.

ಮತ್ತೆ ಅದೇ ಪರಿಸ್ಥಿತಿಯಲ್ಲಿ ದೇಶದ ರೈತ ದೆಹಲಿ ಗಡಿಯಲ್ಲಿ ಅಂಥದೇ ಪರಿಸ್ಥಿತಿ ಎದುರಿಸಿ ನಿಂತಿರುವಾಗ ಈ ಕಿಸಾನ್‌ ಸತ್ಯಾಗ್ರಹ ಚಿತ್ರವನ್ನು ಪ್ರದರ್ಶಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಅನುಮತಿ ನೀಡಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಹರವೂ ಅವರ ಪ್ರಕಾರ ಈ ರೈತ ಹೋರಾಟವನ್ನು ಕೇವಲ ರೈತ ಹೋರಾಟವೆಂದು ವರ್ಗೀಕರಿಸುವುದು ತಪ್ಪು. ಅದು ಇತಿಹಾಸಕ್ಕೆ ಮಾಡುವ ಅಪಚಾರ. ಕಳೆದ ಮೂರು ದಶಕಗಳಿಂದ ಮತೀಯ ಶಕ್ತಿಗಳು ಚುನಾವಣಾ ಹಾದಿಯಲ್ಲಿಯೇ ಕಂಡುಕೊಂಡ ನಿರಂಕುಶ ಏಕಪ್ರಭುತ್ವ ದೇಶದ ಸಾಂಸ್ಕೃತಿಕ, ಸಾಮಾಜಿಕ, ಸಾಂವಿಧಾನಿಕ ಕಾನೂನಾತ್ಮಕ ಸಂಸ್ಥೆಗಳನ್ನು ನಾಶಮಾಡಿ ಸಾವಿರ ವರ್ಷಕ್ಕೂ ಹೆಚ್ಚು ಕಾಲ ಒಟ್ಟಾಗಿ ಜೀವಿಸಿದ ಜನಾಂಗಗಳ ನಡುವೆ ಕಂದಕ ತೋಡಲು ನಡೆಸುತ್ತಿರುವ ಮತೀಯ ಶಕ್ತಿಗಳ ನಿರಂತರ ಹುನ್ನಾರ, ಖಾಸಗೀಕರಣ, ಹಣದ ಅಮಾನ್ಯೀಕರಣ, ಬೆಂಬಿಡದೆ ಕಾಡುತ್ತಿರುವ ಕೃಷಿ ಲೋಕದ ಸಮಸ್ಯೆಗಳ ವಿರುದ್ಧ ಮಲೆತು ನಿಂತಿರುವ ಜನಾಂಗೀಯ ಹೋರಾಟ ಎನ್ನುವುದೇ ಸರಿಯಾದ ವ್ಯಾಖ್ಯಾನ.

ಈ ಬೃಹದ್‌ ಹೋರಾಟದ ಆತ್ಮಕ್ಕೆ ಕನ್ನಡಿ ಹಿಡಿಯುವಂಥ ಅರ್ಥಗಳನ್ನು ಪ್ರತಿಫಲಿಸುವ ಯತ್ನ ಕಿಸಾನ್‌ ಸತ್ಯಾಗ್ರಹ. ದೇಶದ ಕೃಷಿಕರನ್ನು ನಂಬಿಸಿ ಮೋಸಮಾಡಿದ ಕಾರಣ ಮತ್ತೆ ರೈತ ಆಳುವವರ ಅಂಗಳಕ್ಕೆ ಲಗ್ಗೆ ಹಾಕಲು ನಿರ್ಧಾರ ಮಾಡಿ ನಿಂತಿದ್ದಾನೆ. ಸ್ವಾತಂತ್ರ್ಯೋತ್ತರ ಭಾರತದ ಐತಿಹಾಸಿಕ ಚಳವಳಿಯನ್ನು ಹತ್ತಿಕ್ಕಲು ಅಧಿಕಾರಶಾಹಿಯನ್ನು ಬಳಸಿಕೊಂಡು ಸರ್ಕಾರ ನಡೆಸಿರುವ ದೌರ್ಜನ್ಯಕ್ಕೆ ಕೇಸರಿ ಹರವೂ ಸಾಕ್ಷಿ ಒದಗಿಸಿದ್ದಾರೆ.

ಇಂಥ ಐತಿಹಾಸಿಕ ಹೋರಾಟವನ್ನು 85 ನಿಮಿಷಗಳಲ್ಲಿ ಅರ್ಥಗರ್ಭಿತವಾಗಿ ದೃಶ್ಯಗಳ ಮೂಲಕ ಮೂಡಿಸಿರುವ ಕಿಸಾನ್‌ ಸತ್ಯಾಗ್ರಹ ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತೋರಿಸಿ ಅವಮಾನ ಎದುರಿಸಲು ಯಾವ ಸರ್ಕಾರಕ್ಕೆ ತಾನೇ ಧೈರ್ಯವಿರುತ್ತದೆ. ಹಾಗಾಗಿ ಕುಂಟು ನೆಪವೊಡ್ಡಿ ಚಿತ್ರ ಪ್ರದರ್ಶನಗೊಳ್ಳದಂತೆ ಮಾಡುವ ದುಃಸಾಹಸಕ್ಕೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಕೈಹಾಕಿರುವುದು ಕಾಲದ ದುರಂತ ಎನ್ನುವುದು ಹೃದಯವಂತ ಮತ್ತು ಆತ್ಮಸಾಕ್ಷಿಯ ಚಿತ್ರ ನಿರ್ದೇಶಕರ ಅಭಿಪ್ರಾಯ.

“ಕಳೆದ ಬಾರಿಯ Biffesನಲ್ಲಿ ಇದ್ದ ಬಿಜೆಪಿ ಸರ್ಕಾರವೇ ನೇಮಿಸಿದ ಆಯ್ಕೆ ಸಮಿತಿಗೆ ಈ ಚಿತ್ರವನ್ನು ಪ್ರದರ್ಶಿಸುವ ಧೈರ್ಯವಿಲ್ಲದೆ ʼಈ ಬಾರಿ ಸಾಕ್ಷ್ಯ ಚಿತ್ರ ವಿಭಾಗವೇ ಇಲ್ಲ ಎಂದು ಸುಳ್ಳು ಹೇಳಿ ಮೂರು ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಿತ್ತು. ಈ ʼಕಿಸಾನ್‌ ಸತ್ಯಾಗ್ರಹʼ ಚಿತ್ರ ಐದು ಅಂತರಾಷ್ಟ್ರೀಯ ಚಿತ್ರಗಳಲ್ಲಿ ಪ್ರದರ್ಶನಗೊಂಡು, ಒಂದು ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಬಾರಿ ನಾನು ಪ್ರವೇಶ ಕಳುಹಿಸದೆಯೇ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕುಂಟು ನೆಪವೊಡ್ಡಿ ಪ್ರದರ್ಶನ ನಿರಾಕರಿಸಿದೆ ” ಎಂದು ಕೇಸರಿ ಕೇಂದ್ರ ಸರ್ಕಾರದ ಮುಖವಾಡ ಕಳಚಿದ್ದಾರೆ.

ಇರಲಿ, ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ಮುಖ್ಯವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಧೋರಣೆ ಬಗ್ಗೆ Biffes ನ ಸಂಘಟಕರು ಹೇಳುವುದೇನು?

“ಈ ಕಿಸಾನ್‌ ಸತ್ಯಾಗ್ರಹ ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣೀಕರಣ ಪತ್ರ ಇರಲಿಲ್ಲ. ಹಾಗಾಗಿ ಕಾನೂನು ಬದ್ಧವಾಗಿ ಮತ್ತು ಚಿತ್ರೋತ್ಸವದ ನಿಯಮಾನುಸಾರ ಈ ಚಿತ್ರವನ್ನು ಪ್ರದರ್ಶಿಸಲು ನಾವು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಮತಿಗಾಗಿ ಕಳುಹಿಸಿದ್ದೆವು. ಇದೂ ಕೂಡ ನಾವು ಅಂತರಾಷ್ಟ್ರೀಯ ಚಿತ್ರೋತ್ಸವದ ನಿಯಮಾವಳಿಗಳನ್ನು ಪಾಲಿಸಲೇಬೇಕಾದ ನಿಯಮವಿರುವುದರಿಂದ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಚಿತ್ರವೂ ಸೇರಿದಂತೆ ಮೂರು ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ” ಎನ್ನುವ ಅಸಹಾಯಕ ಧ್ವನಿ ಸಂಘಟಕರದ್ದು. “ಸೆನ್ಸಾರ್‌ ಪ್ರಮಾಣೀಕರಣ ಪತ್ರವಿದ್ದಿದ್ದರೆ, ಈ ಚಿತ್ರ ಪ್ರದರ್ಶನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಕೋರುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ” ಎಂದು ಸಂಘಟಕರು ಅಲವೊತ್ತಿಕೊಳ್ಳುತ್ತಾರೆ.

ಒಂದು ಸಂಗತಿಯಂತೂ ಖಚಿತ. ಈ ಚಿತ್ರ ಪ್ರದರ್ಶನಗೊಳ್ಳದಿರಲು ಮುಖ್ಯ ಕಾರಣ ಕೇಂದ್ರ ದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ದ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಧೋರಣೆ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಟೀಕಿಸುವ ಯಾವುದೇ ಸಂಗತಿಯೂ ಜನರನ್ನು ತಲುಪಕೂಡದೆಂಬ ಉದ್ಧಟ ನಿಲುವು ಎನ್ನದೆ ಬೇರೆ ದಾರಿ ಇಲ್ಲ ಎನ್ನುವುದು ದ ಫೆಡರಲ್‌ –ಕರ್ನಾಟಕ ಸಂಪರ್ಕಿಸಿದ ಹಲವಾರು ಚಲನಚಿತ್ರ ನಿರ್ದೇಶಕರ ಅಭಿಪ್ರಾಯ.

Read More
Next Story