ಸಿದ್ದರಾಮಯ್ಯ ಗರ್ವಭಂಗದ ಶಪಥ ಮಾಡಿದ ದೇವೇಗೌಡರ ಅಭಿʻಮಾನʼ ಭಂಗ
x

ಸಿದ್ದರಾಮಯ್ಯ 'ಗರ್ವಭಂಗ'ದ ಶಪಥ ಮಾಡಿದ ದೇವೇಗೌಡರ ಅಭಿʻಮಾನʼ ಭಂಗ


ಕರ್ನಾಟಕ ರಾಜ್ಯ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆಯೇ, ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳಿಗೆ ಸಮಾನ ವಿರೋಧಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಮಣಿಸಬೇಕೆಂಬುದೇ ಉಭಯ ಪಕ್ಷಗಳ ಏಕೈಕ ಕಾರ್ಯಸೂಚಿಯಾಗಿತ್ತು.

ಒಂದು ಕಾಲದ ತಮ್ಮ ಶಿಷ್ಯನೆದರು “ಶಿಷ್ಯಾದಿಚ್ಛೇತ್‌ ಪರಾಜಯಂ” (ಗುರುವು ತನ್ನ ಶಿಷ್ಯನಿಂದ ಸೋಲನ್ನು ನಿರೀಕ್ಷಿಸಬೇಕು) ಎನ್ನುವ ನಾಣ್ಣುಡಿಯನ್ನು ಅರಗಿಸಿಕೊಳ್ಳಲಾಗದ ಮಾಜಿ ಪ್ರಧಾನಿ ದೇವೇಗೌಡರು, ಇದುವರೆಗೆ ಸಿದ್ದರಾಮಯ್ಯನನ್ನು ಹೇಗಾದರೂ ಯಾವುದೇ ರೀತಿಯಲ್ಲಾದರೂ ಮಣಿಸಬೇಕೆಂದು ಪಣ ತೊಟ್ಟಿದ್ದು ನಾನಾಕಾರಣಗಳಿಗಾಗಿ. ದೇವೇಗೌಡರ ಇಚ್ಛೆಯ ವಿರುದ್ಧವಾಗಿ ʻಅಹಿಂದʼ ಸಂಘಟನೆಯನ್ನು ಕಟ್ಟಿ, ಹಿಂದುಳಿದ ವರ್ಗಗಳ ನಾಯಕ ಎನ್ನಿಸಿಕೊಳ್ಳಲು ಜೆಡಿಎಸ್‌ ನಿಂದ ದೂರವಾದ ಸಿದ್ದರಾಮಯ್ಯ ನವರನ್ನು ದೇವೇಗೌಡರು ೧೮ ವರ್ಷವಾದರೂ ಕ್ಷಮಿಸಿಲ್ಲ ಎನ್ನುವುದು ದೇವೇಗೌಡರು ಇತ್ತೀಚೆಗೆ ಚುನಾವಣೆಯ ಸಂದರ್ಭದಲ್ಲಿ ಆಡಿದ ಮಾತುಗಳಿಂದ ಸ್ಪಷ್ಟವಾಗುತ್ತದೆ. ದೇವೇಗೌಡರ ಕಿಡಿನುಡಿಗಳು ಯಾವ ಮಟ್ಟದ್ದೆಂದರೆ, “ಸಿದ್ದರಾಮಯ್ಯನ ಗರ್ವಭಂಗವಾಗಬೇಕು” ಎಂಬುದು ಅವರ ಅರವತ್ತು ವರ್ಷಗಳ ರಾಜಕೀಯದ ಹೆಬ್ಬಯಕೆಯಂತೆ ಅಥವ ಗುರಿಯಂತೆ ತೋರಿತು.

ಹದಿನೆಂಟು ವರ್ಷಗಳ ವೈಮನಸ್ಯ

ಈ ಗುರು-ಶಿಷ್ಯರ ನಡುವೆ ಇಂಥ ಪರಿ ವೈಮನಸ್ಯ ಉಂಟಾಗಲು ಕಾರಣವಾದರೂ ಏನು? ಮತ್ತೆ ಅಧಿಕಾರದ ಪ್ರಶ್ನೆಯೇ ಇಲ್ಲಿಯೂ ಮುಖ್ಯವಾಯಿತು. ೨೦೦೪ರಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ರಚಿಸಿದಾಗ, ದೇವೇಗೌಡರು ತಾವು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದರು ಎನ್ನುವ ನಂಬಿಕೆ ಸಿದ್ದರಾಮಯ್ಯನವರದಾದರೆ, ತಾವು ಎಲ್ಲ ಪ್ರಯತ್ನ ಮಾಡಿಯೂ ಅದು ಕೈಗೂಡಲಿಲ್ಲ ಎನ್ನುವ ಸಮರ್ಥನೆ ದೇವೇಗೌಡರದು. ಆದರೆ ಮಗನನ್ನು ಮುಖ್ಯಮಂತ್ರಿಯಾಗಿಸಲು ಬಿಜೆಪಿಯೊಂದಿಗೆ ಕೈಜೋಡಿಸಿ ದೇವೇಗೌಡರು ೨೦೦೬ರಲ್ಲಿ ನಾಟಕವಾಡಿದರೂ ಎಂಬ ಆರೋಪ ಸಿದ್ದರಾಮಯ್ಯನವರದು. ಇವೆಲ್ಲದರ ಫಲವಾಗಿ ಜೆಡಿಎಸ್‌ ತೊರೆದು ಎಐಪಿಜೆಡಿ (All India Progressive Janata Dal) ಪುನಶ್ಚೇತನ ನೀಡಿ, ತಮ್ಮ ಶಕ್ತಿ ಪ್ರದರ್ಶನ ಮಾಡಿದ ಸಿದ್ದರಾಮಯ್ಯ ಅಂತಿಮವಾಗಿ ಕಾಂಗ್ರೆಸ್‌ ಸೇರಿದರು. ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದದ್ದು ಈಗ ಇತಿಹಾಸ. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳಬೇಕಾದಂಥ ಸಂದರ್ಭ ಎದುರಾಗಿ ದೇವೇಗೌಡರ ಪುತ್ರ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವ ಸಂದರ್ಭ ಎದುರಾದಾಗ ಒಲ್ಲದ ಮನಸ್ಸಿನಿಂದ ಒಪ್ಪಿದ ಸಿದ್ದರಾಮಯ್ಯ, ಆ ಮೈತ್ರಿ ಸರ್ಕಾರವನ್ನು ಬಿಜೆಪಿ ಕೆಡವಿ ಅಧಿಕಾರಕ್ಕೆ ಬಂದಾಗ, ಅದಕ್ಕೆ ಕಾರಣವೆಂದು ದೇವೇಗೌಡರು ಆರೋಪಿಸಿದ್ದು, ಸಿದ್ದರಾಮಯ್ಯ ನವರನ್ನೇ.

ಹೀಗೆ ಘನೀಕೃತವಾದ ವೈಮನಸ್ಯ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಾಗ ಕೃದ್ಧರಾದವರು ದೇವೇಗೌಡರು. ಕೆಲವು ಜೆಡಿಎಸ್‌ ನಾಯಕರೇ ಆಪ್ತ ಮಾತುಕತೆಯಲ್ಲಿ ಒಪ್ಪಿಕೊಳ್ಳುವಂತೆ, ಜೆಡಿಎಸ್‌ ನ ಅಸ್ತಿತ್ವದ ಪ್ರಶ್ನೆಯ ಜೊತೆಗೆ, ದೇವೇಗೌಡರಿಗೆ ಸಿದ್ದರಾಮಯ್ಯನವರಿಗೊಂದು ಪಾಠ ಕಲಿಸುವುದೂ ಮುಖ್ಯವಾಯಿತು. ಹಾಗಾಗಿ ಯಾವ ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ದೇವೇಗೌಡರು ಜರೆದಿದ್ದರೋ, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆಂದು ಸಾರ್ವಜನಿಕವಾಗಿ ಘೋಷಿಸಿದ್ದರೋ, ಅದೇ ಪಕ್ಷದೊಂದಿಗೆ ಸಖ್ಯ ಬೆಳೆಸಿ, ಲೋಕಸಭಾ ಚುನಾವಣೆಗೆ ಇಳಿದಾಗ, ಅವರ ಉತ್ಸಾಹ ದುಪ್ಪಟ್ಟಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಪಕ್ಷ ಉಳಿಸುವ ಸಲುವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಷ್ಟೇ ಅಲ್ಲದೆ, ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಮೋದಿ ಅವರ ಆರಾಧನೆಗಿಳಿದ ದೇವೇಗೌಡರು, ಮೋದಿಯವರ ಪಕ್ಕದಲ್ಲಿ ಆಸೀನರಾಗಿ ಸಿದ್ದರಾಮಯ್ಯನವರ ಗರ್ವಭಂಗ ಮಾಡುವುದಾಗಿ ಶಪಥ ಮಾಡಿದಾಗ, ಯಾರಿಗೂ ಅದು ಆಶ್ಚರ್ಯವೆನ್ನಿಸಲೇ ಇಲ್ಲ. ಕಾರಣ ಅವರ ಮತ್ತು ಸಿದ್ದರಾಮಯ್ಯನವರ ವೈಮನಸ್ಯ ಆ ಮಟ್ಟಿನದು ಎಂಬುದು ಸಾರ್ವತ್ರಿಕ ಸತ್ಯ.

ದೇವೇಗೌಡರ ಚಿಂತನೆ, ಅವಕಾಶ ಬಳಕೆಯ ಲೆಕ್ಕಾಚಾರ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದ, ಅರಗಿಸಿಕೊಂಡಿದ್ದ ಸಿದ್ದರಾಮಯ್ಯ ಇದರಿಂದ ಧೃತಿಗೆಟ್ಟಂತೆ ಕಾಣಿಸಲೇ ಇಲ್ಲ.

ಸಿದ್ದರಾಮಯ್ಯ ಇದಕ್ಕೆ ನೀಡಿದ ಪ್ರತ್ಯುತ್ತರ ಮಾತ್ರ ನಿಜಕ್ಕೂ ಅರ್ಥಪೂರ್ಣವಾಗಿತ್ತು. “ನಾನು ಹೊಸದೇನನ್ನೂ ಹೇಳಲಿಲ್ಲ. ಹೇಳಿದ್ದು ಅವರು ಇದುವರೆಗೆ ಹೇಳಿಕೊಂಡು ಬಂದಿದ್ದನ್ನೇ. ಸತ್ಯ ಹೇಳಿದರೆ ಅಭಿಮಾನ ಭಂಗವೇಕಾಗಬೇಕು? ನನ್ನ ಗರ್ವಭಂಗ ಮಾಡುತ್ತೇನೆಂದು ಹೇಳಿದ್ದಾರೆ. ನನಗೆ ಭಂಗ ಮಾಡಲು ಗರ್ವವೇ ಇಲ್ಲ. ನನಗಿರುವುದು ನನ್ನ ಆತ್ಮಾಭಿಮಾನ ಮಾತ್ರ” ಎಂದು ಉತ್ತರಿಸಿ ಎಲ್ಲರ ಮುಖದಲ್ಲಿ ನಗೆ ಮಿಂಚುವಂತೆ ಮಾಡಿದರು. ಈ ಉತ್ತರ ಕೂಡ ದೇವೇಗೌಡರನ್ನು ಸಾಕಷ್ಟು ಕೆಣಕಿತ್ತು. ಹಣ್ಣು ಮಾಡಿತ್ತು.

ಲೋಕಸಭಾ ಚುನಾವಣೆಯ ಮತದಾನದ ಮೊದಲ ಹಂತ ಮುಗಿದು, ಎರಡನೇ ಹಂತದ ಮತದಾನಕ್ಕೆ ಪ್ರಚಾರ, ಕ್ಷಣಗಣನೆ ಆರಂಭವಾದಾಗ, ದೇವೇಗೌಡರು ದುಃಸ್ವಪ್ನದಲ್ಲಿಯೂ ನಿರೀಕ್ಷಿಸಿದ ಬೆಳವಣಿಗೆಯೊಂದು ನಡೆದು, ಆರು ದಶಕಗಳ ಅವರ ಬದುಕಿಗೆ ಕಪ್ಪುಚುಕ್ಕಿ ಇಟ್ಟವರು, ಮಗ ಎಚ್‌ ಡಿ ರೇವಣ್ಣ ಮತ್ತು ಮೊಮ್ಮಗ ಹಾಗೂ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ. ಜಗತ್ತೇ ಬೆಚ್ಚಿಬೀಳಿಸುವಂಥ ಲೈಂಗಿಕ ಹಗರಣದಲ್ಲಿ ಪ್ರಜ್ವಲ್‌ ರೇವಣ್ಣ ಸಿಲುಕಿಕೊಂಡಿದ್ದಷ್ಟೇ ಅಲ್ಲದೆ, ಅಷ್ಟೇ ಕ್ರೂರವಾದ ಅಪಹರಣ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಎಚ್‌ ಡಿ ರೇವಣ್ಣ ಸಿಕ್ಕಿ ಹಾಕಿಕೊಂಡಿರುವುದು ದೇವೇಗೌಡರಿಗೆ ಆಘಾತವಾಗಿದೆ. ತಮ್ಮ ನೆರವಿಗೆ ಬರುವರೆಂದುಕೊಂಡಿದ್ದ, ಬಿಜೆಪಿಯ ಹೊಸ ಗೆಳೆಯರು, ನಿಧಾನವಾಗಿ, ಉಪಾಯದಿಂದ ದೂರ ಸರಿಯುತ್ತಿರುವುದು ದೇವೇಗೌಡರಿಗೆ ದಿಕ್ಕು ತೋಚದಂತಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣ ಪ್ರಕರಣ ಕೇವಲ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಸುದ್ದಿಯಾಗಿದೆ. ಚರ್ಚೆಗೆ ಗ್ರಾಸವಾಗಿದೆ. ಪ್ರಜ್ವಲ್‌ ರೇವಣ್ಣ ಪರವಾಗಿ ಮತ ಯಾಚಿಸಿದ ಪ್ರಧಾನಿ ಮೋದಿಯಂತೂ ಭಾರಿ ಮುಜುಗರಕ್ಕೊಳಗಾಗಿದ್ದಾರೆ. ಪ್ರಜ್ವಲ್‌ ರೇವಣ್ಣ

ದೇಶದಿಂದಲೇ ಪರಾರಿಯಾಗಿದ್ದಾರೆ. ಅವರ ವಿರುದ್ಧ ರಾಜ್ಯ ಪೊಲೀಸರು ಬ್ಲೂ ಕಾರ್ನರ್‌ ನೋಟೀಸ್‌ ಜಾರಿ ಮಾಡಿದ್ದಾರೆ. ಪ್ರಜ್ವಲ್‌ ರೇವಣ್ಣ ದೇಶ ಬಿಡಲು ತಾವು ಸಹಕಾರ ನೀಡಿಲ್ಲ ಎಂದು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗುತ್ತಿದೆ. ಈ ಮಧ್ಯೆ ಎಚ್‌‌ ಡಿ ರೇವಣ್ಣ ಕೂಡ ಇಂಥದ್ದೇ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವುದು, ಅವರ ಬಂಧನಕ್ಕೊಳಗಾಗುವ ಸಾಧ್ಯತೆ ಇರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. “ನಾನಲ್ಲ… ನಾನಲ್ಲ, ನಾನೇನು ಮಾಡಿಲ್ಲ. ನಾವೇನೂ ಸಹಾಯ ಮಾಡಿಲ್ಲ...” ಎಂದು ಎಲ್ಲರೂ ತಪ್ಪಿಸಿಕೊಳ್ಳುತ್ತಿದ್ದಾರೆ. ಏಕಾದರೂ, ನಾವು ಜೆಡಿಎಸ್‌ ಸಖ್ಯ ಬೆಳೆಸಿದೆವೋ ಎಂದು ಬಿಜೆಪಿ ಪರಿತಪಿಸುವಂತಾಗಿದೆ.

ಕಾಂಗ್ರೆಸ್‌ ನಾಯಕ, ಸಚಿವ ಕೃಷ್ಣಬೈರೇಗೌಡರು; ಸಾರ್ವಜನಿಕವಾಗಿ; “ಇದು ವಿಶ್ವದ ಅತಿ ಹೀನಾಯವಾದ ಲೈಂಗಿಕ ಪ್ರಕರಣಗಳಲ್ಲಿ ಒಂದು. ಈ ರೀತಿಯ ಲೈಂಗಿಕ ದೌರ್ಜನ್ಯ ಪ್ರಕರಣ, ರಾಜ್ಯವಿರಲಿ ದೇಶ ಹಿಂದೆಂದೂ ಕಾಣದಂಥದ್ದು” ಎಂದು ಷರಾ ಬರೆದುಬಿಟ್ಟಿದ್ದಾರೆ.

ದೇವೇಗೌಡರ ʼರಾಜಕೀಯʼ ಕುಟುಂಬವೇ ಒಡೆದು ನುಚ್ಚುನೂರಾಗಿದೆ. “ಪ್ರಜ್ವಲ್‌ ನನ್ನ ಮಗ” ಎಂದು ಹಾಸನದಲ್ಲಿ ಪ್ರಚಾರ ಮಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌‌. ಡಿ. ಕುಮಾರಸ್ವಾಮಿ, “ನಾವು ಬೇರೆ ಬೇರೆ. ರೇವಣ್ಣ ಎಂದರೆ, ರೇವಣ್ಣ ಅವರ ಪತ್ನಿ, ಮತ್ತು ಮಕ್ಕಳಾದ ಪ್ರಜ್ವಲ್‌ ಮತ್ತು ಸೂರಜ್‌, ನಮ್ಮ ಕುಟುಂಬವೇ ಬೇರೆ. ನಮನಮಗೆ ಬೇರೆ ಬೇರೆ ವ್ಯವಹಾರಗಳಿವೆ”, ಎಂದು ನುಣುಚಿಕೊಂಡಾಗಿನಿಂದ, ದೇವೇಗೌಡರಿಗೆ ತಲೆ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ದೇವೇಗೌಡರ ಸಮೀಪವರ್ತಿಗಳು ಹೇಳುತ್ತಿದ್ದಾರೆ. ಅವರೇ ಹೇಳಿರುವ ಮಾತುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. “ಸಿದ್ದರಾಮಯ್ಯನವರ ಗರ್ವಭಂಗ ಮಾಡಲು ಯತ್ನಿಸಿದ ದೇವೇಗೌಡರ ಆತ್ಮಾಭಿಮಾನ ಭಂಗವಾದಂತಾಗಿದೆ”.

Read More
Next Story